ಊರ ಮೇಲೆ ಊರ ಕಂಡೆ,
ನೀರ ಮೇಲೆ ನೀರ ಕಂಡೆ.
ಮರನ ಮೇಲೆ ಮರನ ಕಂಡೆ,
ಗಿರಿಯ ಮೇಲೆ ಗಿರಿಯ ಕಂಡೆ.
ಉರಿಯ ಮೇಲೆ ಉರಿಯ ಕಂಡೆ.
ಈ ಭಾರವ ತಾಳಲಾರದೆ,
ಆ ಉರಿಯೆ ಎದ್ದು ಊರು ಬೆಂದಿತ್ತು, ನೀರು ಬೆಂದಿತ್ತು,
ಮರನು ಬೆಂದಿತ್ತು, ಗಿರಿಯು ಬೆಂದಿತ್ತು.
ಆ ಉರಿ ಉಳಿಯಿತ್ತು, ಆ ಉರಿಯನೆರದು ಸಿರಿಯ ಸೆಳದು
ಪರಮಸುಖಪರಿಣಾಮದೊಳೋಲಾಡುತ್ತ,
ನಿಮ್ಮ ಬರವನೆ ಹಾರುತಿರ್ದೆನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.