ಒಂದು ಹುತ್ತಕ್ಕೆ ಒಂಬತ್ತು ಬಾಯಿ,
ಅಲ್ಲಿಪ್ಪ ಸರ್ಪನೊಂದೆ.
ತಪ್ಪದೆ ಹತ್ತು ಬಾಯಲು ತಲೆಯ ಒಡೆವುದು.
ಅಂಜಿ ನೋಡಿದವರಿಗೆ ಸರ್ಪನಾಗಿಪ್ಪುದು.
ಅಂಜದೆ ನೋಡಿದವರಿಗೆ ಒಂದೆ ಸರ್ಪನಾಗಿರುವುದು.
ಇದು ಕಾರಣವಾಗಿ,
ಸಂಜೆ ಮುಂಜಾನೆ ಎಂಬ ಎರಡಳಿದ ಶರಣಂಗೆ ಒಂದಲ್ಲದೆ ಎರಡುಂಟೆ?
ಮೂರು ಲಿಂಗ, ಆರು ಲಿಂಗ, ಮೂವತ್ತಾರು ಲಿಂಗ,
ಬೇರೆ ಇನ್ನೂರು ಹದಿನಾರು ಲಿಂಗ ಉಂಟೆಂದು
ಸಂತೆಯೊಳಗೆ ಕುಳಿತುಕೊಂಡು ಸಾರುತಿಪ್ಪರು.
ಇದ ನಾನರಿಯೆ, ನಾನರಿಯೆ.
ಹೇಳುವುದಕ್ಕೆ ಎನ್ನ ದೂರ ಕೇಳಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.