Index   ವಚನ - 95    Search  
 
ಕಲ್ಲುದೇವರ ನಂಬಿದವರೆಲ್ಲ ಕಲಿಯುಗದ ಕತ್ತಲೆಯೊಳಗಾಗಿ ಕತ್ತೆಗಳಾಗಿ ಹೋದರು. ಅದೇನು ಕಾರಣವೆಂದರೆ: ತಮ್ಮ ದೇವರು ಇಕ್ಕಿದ ಓಗರವನುಣ್ಣಲೊಲ್ಲದೆ, ಒಡನೆ ಮಾತಾಡದು. ಗುಡಿಯ ಕಲ್ಲು ಮೇಲೆ ಬಿದ್ದರೆ ಒಡೆದು ಹಾಳಾಗಿ ಹೋಗುತ್ತದೆ. ಇಂತಪ್ಪ ಕಲ್ಲ ಪೂಜಿಸಿ, ಸಲ್ಲದೆ ಹೋದರು. ಅದಂತಿರಲಿ, ಮಣ್ಣ ದೇವರು ಎಂದು ಪೂಜಿಸಿ, ಮಜ್ಜನಕ್ಕೆ ನೀಡಲಮ್ಮದೆ, ಲಜ್ಜೆಗೆಟ್ಟು ನಾಯಾಗಿ ಬೊಗುಳಿ ಹೋದರು. ಆದಂತಿರಲಿ, ಮರನ ದೇವರೆಂದು ಪೂಜಿಸಿ ಧೂಪ ದೀಪವ ಮುಂದಿಡಲಮ್ಮರು. ಅದೊಂದು ವ್ಯಾಪಾರಕ್ಕೊಳಗಾಗಿ, ತಾಪತ್ರಯಕ್ಕೆ ಸಿಲ್ಕಿ ಪಾಪಿಗಳಾಗಿ ಸತ್ತುಹೋದರು.ಸಲ್ಲದು ಶಿವನಲ್ಲಿ. ಎಮ್ಮ ಭಕ್ತರಿಗೆ ಈ ಪರಿಯಲ್ಲ ಕೇಳಿರಣ್ಣಾ. ಇದೆಲ್ಲ ಪಾಪಿಗಳ ಹಾಗೆ, ಎನ್ನ ದೇವ ನಡೆವ, ನುಡಿವ, ಇಕ್ಕಿದರುಂಬ, ಕೊಟ್ಟರೆ ತಕ್ಕೊಂಬ, ಪೂಜಿಸಿದರೆ ಪೂಜೆಗೊಂಬ, ಅನೇಕ ಪೂಜೆಯಲ್ಲಿ. ತನ್ನ ನಂಬಿದ ಭಕ್ತರಿಗೆ-ಬುದ್ಧಿಯ ಹೇಳುವ, ಶುದ್ಧಾತ್ಮನ ತೋರುವ. ತಾ ಮುದಿನಲ್ಲಿ ಸಜ್ಜನ ಸದ್ಭಕ್ತರಲ್ಲಿ ಇದ್ದೂ ಇಲ್ಲದಂತಿಪ್ಪ. ಪ್ರಸಿದ್ಧ ಜಂಗಮಲಿಂಗವ ಪೂಜಿಸಿ, ಸ್ವಯಲಿಂಗಿಗಳಾದರು ಎಮ್ಮ ಶರಣರು. ಅವರು ಹೋದ ಹಾದಿಯ ನೋಡಿದರೆ, ಎನಗೊಂದು ಹಾದಿ ಸಿಕ್ಕಿತ್ತು. ಆ ಹಾದಿಗೊಂಡು ಹೋಗಿ ಅವರ ಪಾದವಕಂಡು, ಕೆಟ್ಟು ಬಟ್ಟಬಯಲಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.