ಕಾಣಬಾರದ ಘನವೆಂದು, ಜಗವೆಲ್ಲ ಹೇಳುತ್ತಿದೆ.
ಈ ಕಾಣಬಾರದ ಘನವ ನಾನಾರ ಕೇಳಲಯ್ಯ!
ಗುರು ಹೇಳಲಿಲ್ಲ, ಲಿಂಗ ಹೇಳಲಿಲ್ಲ,
ಜಂಗಮ ಹೇಳಲಿಲ್ಲ.
ಅದು ಹೇಗೆ ಎಂದರೆ: ಗುರು ಒಂದು ಲಿಂಗವ ಕೊಟ್ಟು,
ತನ್ನ ಅಂಗದ ಕುರಿತು,
ಆ ಲಿಂಗಕ್ಕೆ ಬೆಲೆಯ ತಕ್ಕೊಂಡು ಹೋದನಲ್ಲದೆ,
ಆ ಕಾಣಬಾರದ ಘನವ ಹೇಳಿದುದು ಇಲ್ಲ.
ಇದ ಲಿಂಗವೆಂದು ಪೂಜಿಸಿದರೆ,
ಕಂಗಳ ಕಾಮ ಘನವಾಯಿತ್ತಲ್ಲ!
ಎರಡರ ಸಂಗಸುಖವ ಹೇಳಲರಿಯದೆ,
ಜಂಗಮವೆಂದು ಪೂಜೆಯ ಮಾಡಿದರೆ,
ಈ ಜಗದೊಳಗೆ ಹುಟ್ಟಿದ ಪದಾರ್ಥಕ್ಕೆ ಒಡೆಯನಾದನಲ್ಲದೆ,
ಈ ಕಾಣಬಾರದ ಘನವ,
ಹೇಳಿದುದಿಲ್ಲ. ಅದೇನು ಕಾರಣವೆಂದರೆ:
ಆ ಕಾಣಬಾರದ ಘನವ, ತಾನೊಬ್ಬ ಕೇಳಲು ಬಾರದು,
ತಾನೊಬ್ಬರಿಗೆ ಹೇಳಲು ಬಾರದು.
ಏಕೆ? ನಾಮರೂಪಿಲ್ಲವಾಗಿ, ನುಡಿಯಿಲ್ಲ.
ಇಂತಪ್ಪ ಘನ ತಾನೆ, ಒಂದು ರೂಪ ತೊಟ್ಟು,
ತನ್ನ ಲೀಲೆಯ ಎಲ್ಲ ಶರಣರೊಳು ನಟಿಸಿ,
ತನ್ನ ತಾನೆ ಸಾಕಾರ ನಿರಾಕಾರವಾಗಿ,
ಏಕವಾದ ಭೇದವನರಿಯದೆ ಈ ಲೋಕದಲ್ಲಿ ಇದ್ದರೇನು?
ಆ ಲೋಕದಲ್ಲಿ ಹೋದರೇನು?
ಹದಿನಾಲ್ಕುಲೋಕವು ತಾನೆಯಾದ
ಚಿನ್ಮಯನ ಹೇಳಿಹೆನೆಂದರೆ ಎನ್ನಳವಲ್ಲ.
ಬಸವಪ್ರಿಯ ಕೂಡಲಚೆನ್ನಬಸವಣ್ಣಾ ನೀವೆ ಬಲ್ಲಿರಿ.
Art
Manuscript
Music Courtesy:
Video
TransliterationKāṇabārada ghanavendu, jagavella hēḷuttide.
Ī kāṇabārada ghanava nānāra kēḷalayya!
Guru hēḷalilla, liṅga hēḷalilla,
jaṅgama hēḷalilla.