Index   ವಚನ - 106    Search  
 
ಗುರುಪಾದೋದಕಕ್ಕೆ ಹರಿವ ನದಿಯೆಲ್ಲ ಸರಿಯೆಂದು ನುಡಿದರೆ, ಸುರಿಯವೆ ಬಾಲಹುಳು? ಇಷ್ಟಲಿಂಗದ ಪಾದೋದಕಕ್ಕೆ ಅಷ್ಟಾಷಷ್ಟಿತೀರ್ಥಂಗಳು ಸರಿಯಿಲ್ಲ. ಜಂಗಮದ ಪಾದೋದಕಕ್ಕೆ ಜಗದ ತೀರ್ಥ ಜಾತ್ರೆ ಸರಿಯೆಂದು ನುಡಿದರೆ, ಜಗದ ಜಂಗುಳಿಗಳೆಂಬೆ. ಇಂತೀ ತ್ರಿವಿಧ ಪಾದೋದಕ ತ್ರಿವಿಧ ಅಂಗಕ್ಕೆ ಪ್ರಾಣ. ಇಂತು ಮಂತ್ರೋದಕ ಮಜ್ಜನೋದಕ ಪ್ರಸಾದೋದಕ ಈ ತ್ರಿವಿಧವು ತ್ರಿವಿಧ ಲಿಂಗಕ್ಕೆ ಪ್ರಾಣವು. ಈ ಷಡ್ವಿಧ ಪಾದೋದಕವೆ ಷಡ್ವಿಧ ಅಂಗ ಲಿಂಗದ ಕಳೆ. ಆ ಕಳೆಯೆ ಕಾರಣ, ಆ ಕಾರಣವೆ ಎಲ್ಲರಿಗೆಯೂ ಪ್ರಾಣದ ಕಳೆ. ಪ್ರಾಣದ ಕಳೆಯೆ ಪಾದೋದಕ. ಅದಕ್ಕೆ ದೃಷ್ಟ-ರಹಸ್ಯೇ: ಸರ್ವತೀರ್ಥಾಭಿಷೇಕಾದಿ ಶುದ್ಧೇ ಮಾನಸಿ ಜಾಯತೇ | ಗುರೋರಂಘ್ರಿಸ್ಪರ್ಶಜಲಂ ತಸ್ಮಾತ್ ಶಿರಸಿ ಧಾರಯೇತ್ || ಎಂದುದಾಗಿ, ಆ ಪಾದೋದಕವ ಕೊಂಡವನೆ ಪರಬ್ರಹ್ಮಸ್ವರೂಪು. ಬಸವಪ್ರಿಯ ಕೂಡಲಸಂಗಮದೇವಾ, ಮಾಂ ತ್ರಾಹಿ, ತ್ರಾಹಿ ಕರುಣಾಕರನೆ.