Index   ವಚನ - 132    Search  
 
ದಿನದಿನಕ್ಕೆ ದೀನಮಾನವನಂತೆ, ಹೀನಾಶ್ರಯದಲ್ಲಿ ಹುಟ್ಟಿ, ಏನನೂ ಅರಿಯದೆ, ಜ್ಞಾನವು ಇಲ್ಲದೆ, ನಾನು ನೀನೆಂಬ ಉಭಯವು ಅಳಿಯದೆ, ನಾನು ಭಕ್ತ, ನಾನು ಜಂಗಮವೆಂಬವರ ನೋಡಿ, ನಾಚಿತ್ತೆನ್ನ ಮನ್ನವು. ಅಂಗಕ್ಕೆ ಆಚಾರವಿಲ್ಲ, ಮನಸಿಂಗೆ ಅರುಹಿಲ್ಲ, ಪ್ರಾಣಕ್ಕೆ ಗೊತ್ತು ಇಲ್ಲ. ಭಾವಕ್ಕೆ ಹೇಯವಿಲ್ಲದೆ ಇನ್ನಾವ ಬಗೆಯಲ್ಲಿ ಭಕ್ತ ಜಂಗಮವಾದಿರೆ ಹೇಳಿರಣ್ಣ? ಭಕ್ತನಾದರೆ ಎಂತಿರಬೇಕೆಂದರೆ, ಮಾಡಿಹನೆಂಬುದು ಮನದೊಳಗೆ ಹೊಳೆಯದೆ, ನೀಡಿಹೆನೆಂಬ ಅರಿಕೆ ಇಲ್ಲದೆ, ಬೇಡುವುದಕ್ಕೆ ಮುನ್ನವೆ ಆ ಜಂಗಮದ ನಿಲುಕಡೆಯನರಿದು ಮಾಡಬಲ್ಲರೆ ಭಕ್ತ. ಮಾಡಿದ ಭಕ್ತಿಯ ಕೈಕೊಂಡು, ಆ ಭಕ್ತನ ಕರಸ್ಥಲಕ್ಕೆ ಲಿಂಗವಾಗಿ, ಮನಸ್ಥಲಕ್ಕೆ ಅರಿವಾಗಿ, ಭಾವಸ್ಥಲಕ್ಕೆ ಜಂಗಮವಾಗಿ ಅಡಗಿದಡೆ, ಐಕ್ಯನೆಂಬೆ, ಜಂಗಮವೆಂಬೆ, ಲಿಂಗವೆಂಬೆ, ಗುರುವೆಂಬೆ. ಆ ಭಕ್ತ ಜಂಗಮ ಎರಡಕ್ಕೂ ಫಲಂ ನಾಸ್ತಿ, ಪದಂ ನಾಸ್ತಿ, ಭವಂ ನಾಸ್ತಿ. ಆ ನಿಲುವಿಂಗೆ ನಮೋ ನಮೋ ಎಂದು ಬದುಕಿದೆ, ನೀವು ಸಾಕ್ಷಿಯಾಗಿ, ಬಸವಪ್ರಿಯ ಕೂಡಲಚೆನ್ನಬಸವಣ್ಣ.