ನಾವು ಜಂಗಮವೆಂಬರು, ತಾವು ಭಕ್ತರೆಂಬರು.
ಭಕ್ತ, ಜಂಗಮದ ನಿಲುಕಡೆ ಎಂತಿರಬೇಕೆಂದರೆ,
ಮೂರುವಿಡಿದು ಮೂರನರಿದಡೆ ಭಕ್ತನೆಂಬೆ.
ಮೂರ ಬಿಟ್ಟರೆ, ಮೂರ ಕಂಡರೆ, ಜಂಗಮವೆಂಬೆ.
ಈ ಉಭಯವು ಒಂದಾದ ಭೇದವೆಂತೆಂದರೆ,
ಭಕ್ತನ ನಡೆನುಡಿಯಲ್ಲಿ ಕವಲುದೋರುತಿರ್ದಡೆ,
ಹೀಗಲ್ಲವೆಂದು ಆ ಸ್ಥಲಕ್ಕೆ ತಕ್ಕ ಹಾಗೆ
ನಿಲುಕಡೆಯ ತೋರಿ ಕೊಟ್ಟು,
ಆತನಲ್ಲಿದ್ದ ಕರ್ಮವು ತನ್ನ ಮುಟ್ಟದಂತೆ, ಅವನ ತಟ್ಟದಂತೆ,
ಈ ಉಭಯಕ್ಕೊಡೆಯನಾಗಿ ನಿಂದರೆ, ಜಂಗಮಲಿಂಗವೆಂಬೆ.
ಇಂತಾದರೆ ಆ ಭಕ್ತ ಜಂಗಮಕ್ಕೆ ನಮೋ ನಮೋ ಎಂಬೆ.
ಇಂತಲ್ಲದೆ ಇದ್ದವರ ಎನ್ನತ್ತ ತೋರದಿರಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.