ನುಡಿದ ನುಡಿಗೆ ನಡೆ ಇಲ್ಲದಿದ್ದರೆ,
ಮೃಡನ ಶರಣರು ಕಡೆನುಡಿದಲ್ಲದೆ ಮಾಣರು.
ಎಮ್ಮ ಶರಣರು ಮತ್ತೆ ಹೊಡೆಗೆಡೆದು
ಎನ್ನ ನುಡಿದು, ಹೊಡೆದು, ರಕ್ಷಿಸಿದಿರಲ್ಲ.
ಎನ್ನ ಒಡೆಯರು ನೀವಹುದೆಂದು
ಬಿಡದೆ ಅವರ ಬೇಡಿಕೊಂಬೆ.
ಇದೀಗ ನಮ್ಮ ಶರಣರ ನಡೆನುಡಿ. ಅದಂತಿರಲಿ.
ಅದಕೆ ನಮೋ ನಮೋ ಎಂಬೆ.
ಈ ಪೊಡವಿಯೊಳು ಹುಟ್ಟಿದ ಮನುಜರೆಲ್ಲರು ಒಡೆಯರೆಂದು
ಪೂಜೆಯಮಾಡಿ,ತುಡುಗುಣಿನಾಯಿಯಂತೆ ಒಕ್ಕುದ ಮಿಕ್ಕುದ ನೆಕ್ಕಿ,
ತಮ್ಮ ಇಚ್ಛೆಗೆ ನುಡಿದರೆ ಒಳ್ಳಿದನೆಂಬರು.
ಸತ್ಯವ ನುಡಿದರೆ ಸಾಯಲವನೆಲ್ಲಿಯ ಶರಣ ?
ಇವನೆಲ್ಲಿಯ ಜಂಗಮ?
ಇವರ ಕೂಡಿದ ಮನೆ ಹಾಳೆಂದು,
ಕಂಡ ಕಂಡವರ ಕೂಡ ಹೇಳಿಯಾಡುವ,
ಈ ಕಾಳುಮನುಜರನು
ಲಿಂಗ ಜಂಗಮವೆಂದು ನುಡಿದು ಕೂಡಿಕೊಂಡು ಹೋದರೆ,
ತನ್ನ ತನ್ನ ಪದಾರ್ಥವ ಹಿಡಿದರೆ,
ಒಡೆಯನೆ ಬದುಕಿದೆ, ತ್ರಾಹಿ ಎಂಬ ಮೃಡಶರಣನು
ಈ ಅಡ[ಗು] ಕಚ್ಚಿಕೊಂಡಿರುವ,
ಹಡಿಕಿಮನುಜರನು ಸರಿಗಂಡಡೆ,
ನಾಯಕ ನರಕದಲ್ಲಿಕ್ಕುವ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.