Index   ವಚನ - 150    Search  
 
ಪರಾಪರದಲ್ಲಿ ಹುಟ್ಟಿದ ಪಾದೋದಕ. ಪರಬ್ರಹ್ಮದ ಪರಮಪ್ರಕಾಶವೆ ಪಾದೋದಕ. ಪರಿಪೂರ್ಣವ ಪ್ರವೇಶಿಸಿಕೊಂಡಿರ್ಪುದೆ ಪಾದೋದಕ. ಪರಮನಂಘ್ರಿಕಮಲದಲ್ಲಿ ಹುಟ್ಟಿದುದೆ ಪಾದೋದಕ. ಪರತರದ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯದೊಳಡಗಿದ ಪಾದೋದಕ. ಅದಕ್ಕೆ ದೃಷ್ಟ : ಪಾಕಾರಂ ಪರಮಜ್ಞಾನಂ ದೋಕಾರಂ ದೋಷನಾಶನಂ | ದಕಾರಂ ದಹತೇ ಜನ್ಮ ಕಕಾರಂ ಕರ್ಮಛೇದನಂ || ಎಂದುದಾಗಿ, ಇಂತಪ್ಪ ಪಾದೋದಕವ ಕೊಂಡು, ಪರಿಣಾಮ ತೃಪ್ತಿಯನೆಯ್ದುವ ಸದ್ಭಕ್ತಂಗೆ ನಮೋ ನಮೋ ಎಂಬೆ. ಬಸವಪ್ರಿಯ ಕೂಡಲಸಂಗಮದೇವಾ, ಮಾಂ ತ್ರಾಹಿ, ತ್ರಾಹಿ ಕರುಣಾಕರನೆ.