Index   ವಚನ - 155    Search  
 
ಪ್ರಥಮದಲ್ಲಿ ಭಕ್ತಸ್ಥಲವೆಂದು ನುಡಿವಿರಿ. ಆ ಭಕ್ತಸ್ಥಲವೆಲ್ಲರಿಗೆಂತಾಯಿತ್ತು ಹೇಳಿರಣ್ಣಾ ! ಸತಿಪತಿಸುತರು ಭೃತ್ಯಾಚಾರದಲ್ಲಿ ಭಕ್ತಿಯ ಮಾಡಿಹೆನೆಂದಣ್ಣಗಳು ಕೇಳಿರೊ. ಪತಿಯ ಮಾತ ವಿೂರುವಾಕೆ ಸತಿಯಲ್ಲ. ಪಿತನ ಮಾತ ವಿೂರುವಾತ ಸುತನಲ್ಲ. ಅತಿ ಕೃಪೆಯಿಂದ ದೀಕ್ಷೆ, ಶಿಕ್ಷೆಯನಿತ್ತ ಗುರುವಿನಾಜ್ಞೆಯ ವಿೂರುವಾತ ಶಿಷ್ಯನಲ್ಲ. ಇಂತಿವು ಭಕ್ತಸ್ಥಲಕ್ಕೆ ಸಲ್ಲವು ಕೇಳಿರಣ್ಣಾ ! ಆ ಸತಿಗೆ ಪತಿಯೇ ಗುರುವಾಗಿ, ಆ ಸುತಗೆ ಪಿತನೆ ಗುರುವಾಗಿ, ಆ ಪಿತಗೆ ಅತಿಕೃಪೆಯಿಂದ ದೀಕ್ಷೆ ಶಿಕ್ಷೆಯನಿತ್ತ ಗುರುವೆ ಗುರುವಾಗಿ, ಏಕಪದವಿಲ್ಲಾಗ ಭಕ್ತಸ್ಥಲವ ಮಾಡಿಹೆನೆಂಬಣ್ಣಗಳಿರಾ ಕೇಳಿ. ಈ ಒಂದು ಸ್ಥಲವುಳ್ಳವರಿಗೆ ಆರುಸ್ಥಲವು ಅಡಗಿತ್ತು. ಇಂತಿವು ಏಕಸ್ಥಲವಾದ ಮೇಲೆ ಮುಂದೆಂತೆಂದಡೆ, ಆ ಪತಿಗೆ ಸತಿಯೇ ಗುರುವಾಗಿ, ಆ ಪಿತಗೆ ಸುತನೇ ಗುರುವಾಗಿ, ಅತಿಕೃಪೆಯಿಂದ ದೀಕ್ಷೆ ಶಿಕ್ಷೆಯನ್ನಿತ್ತ ಗುರುವೇ ಶಿಷ್ಯನಾಗಿ, ಇಂತಿದೀಗ ನಿರ್ಣಯಸ್ಥಲವು. ಇದನರಿಯದೆ, ಅವಳು ಸತಿ, ತಾ ಪತಿ ಎಂಬ ಹಮ್ಮಿಂದವೇ ಅವರು ಸುತರು, ತಾ ಪಿತನೆಂಬ ಹಮ್ಮಿಂದವೇ ಅವರು ಶಿಷ್ಯರು, ತಾ ಗುರುವೆಂಬ ಹಮ್ಮಿಂದವೇ ಇದು ಲಿಂಗಪಥಕ್ಕೆ ಸಲ್ಲದು, ಹಿಡಿದ ವ್ರತಕ್ಕೆ ನಿಲ್ಲದು ಇದ ಮುಂದೆ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.