Index   ವಚನ - 176    Search  
 
ಮರ್ತ್ಯಲೋಕದ ಮಹಾಗಣಂಗಳು ನೀವು ಕೇಳಿರಯ್ಯ, ಅದೇನು ಕಾರಣವೆಂದರೆ, ಗುರುವೆನ್ನದು, ಲಿಂಗವೆನ್ನದು, ಜಂಗಮವೆನ್ನದು, ಪ್ರಸಾದವೆನ್ನದು. ಈ ಚತುರ್ವಿಧವು ಎನ್ನದಾದ ಕಾರಣದಿಂದ, ಇದರ ಹಾನಿವೃದ್ಧಿ ಎನ್ನದಾದ ಕಾರಣದಿಂದ, ಕಂಡುದ ನುಡಿವೆನಲ್ಲದೆ, ಜಗದಂತೆ ಮಿಥ್ಯಾಳಾಪವಾಗಿ ನುಡಿವನಲ್ಲ. ಮುಂದೆ ಸತ್ತುಗಿತ್ತು ಹುಟ್ಟುವನಲ್ಲ, ಮುಂದೆ ಹೊತ್ತುದ ಹುಸಿಮಾಡಿ, ಮತ್ತೊಂದು ದಿಟ ಮಾಡುವನಲ್ಲ. ಅದನೇನು ಕಂಡವರು ಕಂಡಂತೆ ನುಡಿವರು. ಉಂಡವರು ಉಂಡಂತೆ ತೇಗುವರು ಎಂಬುದ ನೀವು ಅರಿದುಕೊಳ್ಳಿ. ಪಂಚಾಚಾರಕ್ಕೊಳಗಾದ ಶಿವಭಕ್ತರು ಎಮ್ಮಲ್ಲಿ ಹಿಂಚುಮುಂಚು ನೋಡಬೇಡ. ನಿಮ್ಮ ಪ್ರಪಂಚನೆಯ ಹರಿದುಕೊಂಡು, ನಿಮ್ಮಲ್ಲಿರ್ದ ಭವಿಗಳನೆ ಭಕ್ತರ ಮಾಡಿ ವಿವರಿಸಿ ನೋಡಲಾಗಿ, ನಾ ನೀನೆಂಬುವದಕ್ಕಿಲ್ಲ. ಆ ಉಭಯದ ಗೊತ್ತ ಮೆಟ್ಟಲಾಗಿ, ಭಕ್ತಜಂಗಮ ಒಂದೇ ಅಂಗ, ಅದಕ್ಕೆ ನಿಶ್ಚಿಂತ ನಿಜೈಕ್ಯವು. ಆ ನಿಲುವಿಂಗೆ ನಮೋ ನಮೋ ಎನುತಿರ್ದೆ, ಬಸವಪ್ರಿಯ ಕೂಡಲಚೆನ್ನಸಂಗನಬಸವಣ್ಣಾ.