ಯೋಗಾಂಗ ಭೋಗಾಂಗ
ತ್ಯಾಗಾಂಗ ಈ ತ್ರಿವಿಧವನು ಮರೆದು,
ಭಕ್ತಿಯೋಗದ ಮೇಲೆ ನಿಂದು,
ರಾಜಯೋಗದ ಮೇಲೆ ನಿಂದು,
ನಡೆದು ನುಡಿದು ತೋರುವರು ನಮ್ಮ ಶರಣರು.
ಗುರು ಲಿಂಗ ಜಂಗಮ ಈ ತ್ರಿವಿಧವನು,
ಸುಖ ದುಃಖ ಚಿಂತೆ ಸಂತೋಷವೆಂಬುವ ಕಳೆದು,
ಉತ್ಪತ್ತಿ ಸ್ಥಿತಿ ಲಯವೆಂಬುವಂ ಸುಟ್ಟು,
ದೃಕ್ಕು ದೃಶ್ಯ ನಿಜವೆಂಬ ತ್ರಿಕರಣವ ಏಕವ ಮಾಡಿ,
ಪಿಂಡಾಂಡ ಬ್ರಹ್ಮಾಂಡ ಒಂದೆಂಬುದನರಿದು,
ಸಂದಹರಿದು ನಿಂದ ನಿಜಾನಂದದಲ್ಲಿ
ಹಿಂದುಮುಂದೆಂಬುದನರಿಯದೆ,
ನಿಮ್ಮೊಳೊಂದಾದ ಲಿಂಗೈಕ್ಯಂಗೆ ವಂದಿಸಿ ವಂದಿಸಿ,
ಎನ್ನ ಬಂಧನ ಹರಿದು, ನಾನು ಬಟ್ಟಬಯಲಾದೆನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.