Index   ವಚನ - 203    Search  
 
ಶಿವಭಕ್ತರ ಹಾದಿಯ ಕಾಣದೆ, ಹರಗಣಂಗಳೆಲ್ಲಕ್ಕೆ ಪರಮಗುರುವಾಗಿ, ಪರಮಾರಾಧ್ಯರಾಗಿ ಸುಳಿದಿರಲ್ಲದೆ ನೀವು ಒಡಲುವಿಡಿದಿದ್ದರೆನ್ನಬಹುದೆ? ಅದೇನು ಕಾರಣವೆಂದರೆ, ಎನ್ನ ಭವವ ಛೇದನೆಯ ಮಾಡಿದುದಕ್ಕೆ ಎನ್ನ ಮನಕ್ಕೆ ಮನವೇ ಸಾಕ್ಷಿ. ಮತ್ತೆ ಚೆನ್ನಮಲ್ಲೇಶ್ವರ ಸಾಕ್ಷಿ. ಮರವೆಯಿಂದ ಈ ಮರ್ತ್ಯದಲ್ಲಿ ಒಡಲುವಿಡಿದು ಹುಟ್ಟಿದವರು ಬ್ರಹ್ಮನಾದರೂ ಆಗಲಿ, ವಿಷ್ಣುವಾದರೂ ಆಗಲಿ, ರುದ್ರನಾದರೂ ಆಗಲಿ, ಶಿವನಾದರೂ ಆಗಲಿ, ಸದಾಶಿವನಾದರೂ ಆಗಲಿ, ಮಾಯೆವಿಡಿಸಿ ಕಾಡಿದಲ್ಲದೆ ಮಾಣದು. ಮಿಕ್ಕಿನವರ ಭವಕ್ಕೆ ಕಡೆ ಇಲ್ಲ . ಎನ್ನ ಪರಮಾರಾಧ್ಯರು ಚೆನ್ನಮಲ್ಲೇಶ್ವರ ಮಾಯೆಯ ಮಂಡೆಯ ಮೆಟ್ಟಿ, ಎನ್ನ ತನು ಮನ ಧನಕ್ಕೆ ಒಡೆಯನಾಗಿ ತನ್ಮಯನಾಗಿ ತಾನೇ ರೂಪಾದನಯ್ಯ. ನಾನೆಂಬುದಿಲ್ಲ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .