Index   ವಚನ - 208    Search  
 
ಶ್ರೀ ಗುರುವಿನ ಕೃಪಾದೃಷ್ಟಿ ತತ್‍ಶಿಷ್ಯನ ಹೃದಯದಲ್ಲಿ ಪ್ರವೇಶಿಸಿ, ಆ ತತ್ ಶಿಷ್ಯಂ ಗುರೂಪಾವಸ್ಥೆಯ ಮಾಡುತ್ತಿರಲು ಆ ಶ್ರೀ ಗುರುಸ್ವಾಮಿ ಪ್ರಸನ್ನರಾಗಿ, ಹತ್ತಿರಕ್ಕೆ ಕರೆದು, ಬತ್ತಿನಲ್ಲಿ ಕುಳ್ಳಿರಿಸಿ, ಮಸ್ತಕದ ಮೇಲೆ ಹಸ್ತವನ್ನಿರಿಸಲು ಅವಲೋಹದ ಮೇಲೆ ಪರುಷ ಬಿದ್ದಂತಾಯಿತ್ತಯ್ಯಾ ಲಲಾಟದಲ್ಲಿ ವಿಭೂತಿಯ ಧರಿಸಲು ಮುಕ್ತಿರಾಜ್ಯ ಕ್ಕೊಡೆತನವನಿತ್ತಂತಾಯಿತ್ತಯ್ಯಾ ಸಂಚಿತ ಪ್ರಾರಬ್ಧ ಆಗಾಮಿ ಜಾರಿ ಹೋದವಯ್ಯಾ. ಕರ್ಣದಲ್ಲಿ ಮಂತ್ರವ ಹೇಳಲೊಡನೆ ಪಂಚಾಕ್ಷರವೆ ಸ್ಥಾಪ್ಯವಾಗಿ ಪಂಚಭೂತಂಗಳು ಬಿಟ್ಟುಹೋದವಯ್ಯಾ. ಕರಸ್ಥಲಕ್ಕೆ ಲಿಂಗವ ಕೊಡಲೊಡನೆ ಅಂಗವೆ ಲಿಂಗಾರ್ಪಣವಾಗಿ ಸರ್ವಾಂಗ ಲಿಂಗವಾಗಿ ಅಂಗಕರಣಂಗಳಲ್ಲಿ ಲಿಂಗಕಿರಣಂಗಳಾಗಿ ಆಡುವುದು ಲಿಂಗದ ಲೀಲೆ ಎಂದಂದು ಆ ತತ್‍ಶಿಷ್ಯ ತಲೆಯೆತ್ತಿ ನೋಡಿ ತಾನನಾದಿ ಶಿವತತ್ವವಲ್ಲದಿದ್ದರೆ ಆ ಪರಶಿವನಪ್ಪ ಗುರುವೆ ಪ್ರಸನ್ನರಪ್ಪರೆ ಎಂದರಿದು, ಪಾದದ ಮೇಲೆ ಬಿದ್ದು ಬೇರಾಗದಿರಲು ಆತನು ಗುರುವ ಸೋಂಕಿ ಕಿಂಕುರ್ವಾಣ ಭಯಭಕ್ತಿಯಿಂದ ಅಹಂಕಾರವಳಿದು ಭಕ್ತನಾದ. ಮನ ಲಿಂಗವ ಸೋಂಕಿ ಭಯ ಭಕ್ತಿಯಿಂದ ಚಿತ್ತಗುಣವಳಿಸು ಮಹೇಶ್ವರನಾದ, ಧನ ಜಂಗಮವ ಸೋಂಕಿ ಪ್ರಕೃತಿಯಳಿದು, ಪರಮಾನಂದರಸಭರಿತನಾಗಿ ಮನ ಮನನ ಲೀಯವಾಗಿ ಪ್ರಾಣಲಿಂಗಿಯಾದ. ಭಾವ ಪ್ರಸಾದವ ಸೋಂಕಿಯೆ ಭ್ರಮೆಯಳಿದು ನಿರ್ಭಾವಿಯಾಗಿ ಜೀವಗುಣವಳಿದು ಶರಣನಾದ. ಅರಿವು ತನುಕರಣ ಮನ ಇಂದ್ರಿಯನವಗಿವಿಸಿ ಸರ್ವಾಂಗಲಿಂಗವಾಗಿ ಅರಿವಡಗಿ ಮರಹು ನಷ್ಟವಾಗಿ ತೆರಹಿಲ್ಲದ ಬಯಲಿನೊಳಗೆ ಕುರುಹಳಿದುನಿಂತ ಬಸವಪ್ರಿಯ ಕೂಡಲಸಂಗಮದೇವನೆಂಬ ಶ್ರೀಗುರುವಿನ ಚರಣಕ್ಕೆ ನಮೋ ನಮೋ ಎನುತಿರ್ದೆನು.