Index   ವಚನ - 211    Search  
 
ಶ್ರೋತ್ರ, ನೇತ್ರ, ಜಿಹ್ವೆ, ತ್ವಕ್ಕು, ಘ್ರಾಣವೆಂಬ ಬುದ್ಧೀಂದ್ರಿಯಂಗಳನರಿದು, ವಾಕ್ಕು, ಪಾಣಿ, ಪಾದ, ಪಾಯು, ಗುಹ್ಯವೆಂಬ ಕರ್ಮೇಂದ್ರಿಯವ ತೊರೆದು, ಗಂಧ, ರಸ, ರೂಪು, ಸ್ಪರ್ಶನ, ಶಬ್ದವೆಂಬ ಪಂಚೇಂದ್ರಿಯವ ಜರಿದು, ಮನ, ಬುದ್ಧಿ, ಚಿತ್ತ, ಅಹಂಕಾರವೆಂಬ ಚತುಷ್ಟಯ ಕರಣಂಗಳ ಮೆಟ್ಟಿ, ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರವೆಂಬ ಅರಿಷಡ್ವರ್ಗಮಂ ಸುಟ್ಟು, ತನುವ್ಯಸನ, ಮನವ್ಯಸನ, ಧನವ್ಯಸನ, ವಾಹನವ್ಯಸನ, ಉತ್ಸಾಹವ್ಯಸನ, ಸೇವಕವ್ಯಸನ, ಮತ್ಸರವ್ಯಸನವೆಂಬ ಸಪ್ತವ್ಯಸನಂಗಳ ಸ್ವಪ್ನದಲ್ಲಿ ನೆನೆಯದೆ, ಪೃಥ್ವಿ, ಅಪ್ಪು, ಅಗ್ನಿ, ವಾಯು, ಆಕಾಶ, ಚಂದ್ರ, ಸೂರ್ಯ, ಆತ್ಮರೆಂಬ ಇಂತೀ ಅಷ್ಟಮದವ ಹಿಟ್ಟುಗುಟ್ಟಿ, ಪ್ರಾಣ, ಅಪಾನ, ಉದಾನ, ಸಮಾನ, ನಾದ, ಕೂರ್ಮ, ಕ್ರಕರ, ದೇವದತ್ತ, ಧನಂಜಯವೆಂಬ ದಶವಾಯುವ ಕಡೆಮೆಟ್ಟಿ, ಸಂಸಾರವ ಒಡಹಾಯ್ದು, ಜಗವ ಹೊದ್ದದೆ, ತಾನೊಂದು ಕಡೆಯಾಗಿ ನಿಂದು, ಮಾಯೆಗೆ ಒಡೆಯನಾಗಿ, ಆ ಮಹಾಘನವ ಸೂರೆಗೊಂಡ ಶರಣಂಗೆ ನಮೋ ನಮೋ ಎಂದು ಬದುಕಿದೆನಯ್ಯಾ. ಬಸವಪ್ರಿಯ ಕೂಡಲಚೆನ್ನಬಸವಣ್ಣ, ನಿಮ್ಮ ಧರ್ಮ, ನಿಮ್ಮ ಧರ್ಮ.