Index   ವಚನ - 234    Search  
 
ಹಾವ ಹಿಡಿವುದ ಹಾವಾಡಿಗ ಬಲ್ಲನಲ್ಲದೆ, ಕಡೆಯಲಿದ್ದ ಜಾವಳಿಗನೆತ್ತ ಬಲ್ಲನು? ನೋವು ಬಂದರೆ ವ್ಯಾಧಿಯಲ್ಲಿ ನರಳುವಾತ ಬಲ್ಲನಲ್ಲದೆ, ಕಡೆಯಲಿಪ್ಪ ದುರುಳನೆತ್ತ ಬಲ್ಲನು? ದೇವ ನಿಮ್ಮ ಶರಣನು ಬೆರೆದಿಪ್ಪ ಭೇದವ ನೋವುತ್ತ ಬೇವುತ್ತ ಧಾವತಿಗೊಳುತಿಪ್ಪ ಗಾವಿಲರೆತ್ತ ಬಲ್ಲರು ಲಿಂಗೈಕ್ಯರನುವ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ?