Index   ವಚನ - 1    Search  
 
ಅಂಗದ ಮೇಲೆ ಲಿಂಗವುಂಟೆಂದು ಆಗವೆಲ್ಲ ಬೆಬ್ಬನೆ ಬೆರೆತು ಬೀಗಿ ನುಡಿವರು. ಅಂಗವೇ ಲಿಂಗವನರಿಯದು ಲಿಂಗವೇ ಅಂಗವನರಿಯದು. ಅಂಗವಾವುದು, ಲಿಂಗವಾವುದು, ಸಂಗಸಂಬಂಧವಾವುದೆಂದೆರಿಯರು. ಅಂಗಗುಣವಳಿದು ಆಚಾರವಳಪಟ್ಟು ನಿಂದಂಗವೆ ಅಂಗ. ಲಿಂಗವಾವುದೆನಲು, ಪಾಷಾಣಗುಣವಿಡಿದ ಭ್ರಮೆಯಳಿದು, ಭಾವವಳಿದು, ಲಿಂಗಸಂಬಂಧವುಳಿದುದೆ [ಲಿಂಗ] ಲಿಂಗಸಂಬಂಧವಾವುದೆನಲು ಸಂಸಾರವಿಡಿದು ವರ್ತಿಸುವ ಭ್ರಾಂತವಳಿದು ಜ್ಞಾನಸಂಬಂಧವಳವಟ್ಟುದೇ ಸಂಬಂಧ. ಇಂತು ಅಂಗ ಲಿಂಗ ಜ್ಞಾನಸಂಬಂಧವನರಿಯದಿದ್ದಡೆ, ಅಂಗ ಬಿದ್ದು,ಲಿಂಗ ಉಳಿದು, ಸಂಬಂಧಚೈತನ್ಯ ಹಿಂಗಿಹೋದಲ್ಲಿ ಭಂಗ ಹೊದ್ದಿತ್ತು, ಮಹಾಲಿಂಗ ಕಲ್ಲೇಶ್ವರಾ.