Index   ವಚನ - 8    Search  
 
ಅಯ್ಯಾ ವಿಪ್ರರೆಂಬವರು ಮಾತಂಗಿಯ ಮಕ್ಕಳೆಂಬುದಕ್ಕೆ ಇದೇ ದೃಷ್ಟ. ಮತ್ತೆ ವಿಚಾರಿಸಿ ಕೇಳಿದಡೆ ಹೇಳುವೆನು: ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆವೆಂದು, ಕಡಿದು ಹಂಚಿ ತಿಂದರಂದು ಗೋಮಾಂಸವ. ಬಿಡದೆ ಅತ್ಯಂತ ಉಜ್ಞಕ್ರಮವೆಂದು ಹೋತನ ಕೊಂದು, ಚಿಕ್ಕ ಚಿಕ್ಕವಾಗಿ ಕಡಿಮೆ ಭಕ್ಷಿಸಿದುದ ಕಂಡು, ಮಿಕ್ಕ ಹದಿನೇಳುಜಾತಿ ವಿಪ್ರರ ಕೈಯಲನುಗ್ರಹವ ಪಡೆದು, ತಿನಕಲಿತರಯ್ಯಾ. ಶ್ವಪಚೋಪಿ ವಿಪ್ರ ಸಮೋ ಜಾತಿಭೇದಂ ನ ಕಾರಯೇತ್| ಅಜಹತ್ಯೋಪದೇಶೀನಾಂ ವರ್ಣನಾಂ ಬ್ರಾಹ್ಮಣೋ ಗುರುಃ|| ಎಂಬುದಾಗಿ, ಕಿರಿಕಿರಿದ ತಿಂದ ದ್ವಿಜರು ನೆರೆದು ವೈಕುಂಠಕ್ಕೆ ಹೋಹರೆ? ನೆರೆಯಲೊಂದ ತಿಂದ ವ್ಯಾಧ ದ್ವಿಜರಿಂದಧಿಕ. `ಭರ್ಗೋ ದೇವಸ್ಯ ಧೀಮಹಿ' ಎಂಬ ದಿವ್ಯಮಂತ್ರವನೋದಿ, ನಿರ್ಬುದ್ಧಿಯಾದಿರಿ. ಶಿವಪಥವನರಿಯದೆ ಬರುದೊರೆವೋದಿರಿ. ಆದಡೀ ನರಕಕ್ಕೆ ಭಾಜನವಾದಿರಿ. ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣಂಗೆ ಸರಿಯೆ ಜಗದನ್ಯಾಯಿಗಳು.