Index   ವಚನ - 17    Search  
 
ಆಗಮಾಚಾರವಿಲ್ಲೆಂದು ಭಕ್ತರನಲ್ಲೆಂಬ ಭ್ರಮಿತರು ನೀವು ಕೇಳಿರೆ! ಮುಕ್ಕುಳಿಸಿದ ನೀರ ಮಜ್ಜನಕ್ಕೆರವುದಿದಾವಾಗಮಾಚಾರ? ಸರವ ಕಟ್ಟಿ, ಪತ್ರೆಯ ಹರಿದು ಹಾಕೂದಿದಾವ ಮಂತ್ರದೊಳಗು? ಸರ್ರನೆ ಹರಿತಂದು ಸರ್ರನೆ ಕಲ್ಲಲಿಡುವುದಿದಾವ ಪೂಜೆ? ಬಹುಬುದ್ಧಿಗಲಿತು, ಬಹಳ ನುಡಿ ಶಿವಭಕ್ತರ ಕೂಡೆ ಸಲ್ಲದು, ಶರಣೆಂದು ಶುದ್ಧರಪ್ಪುದು. ಮಹಾಲಿಂಗ ಕಲ್ಲೇಶ್ವರನು ತನ್ನ ಭಕ್ತರ ನಿಲುವನು ತಾನೆ ಬಲ್ಲನು.