ಆದಿಯಲ್ಲಿ ಪ್ರಸಾದ, ಏಕಮುಖ ಸಾಧಕರ ಮುಖದಿಂದ
ಅನಂತಮುಖವಾದುದು.
ಎಯ್ದಿ ನಿಂದಲ್ಲಿ ಮತ್ತೆ ಏಕಮುಖವಾದುದು.
ಇದರ ಭೇದವ ಬಸವಣ್ಣ ಚೆನ್ನಬಸವಣ್ಣನ ಸಂಪಾದನೆಯಿಂದಲಾನರಿದೆನು.
ಅರಿದಡೇನು ಎನಗಾಯತವಾಗದು. ಆಯತವಾದಡೇನು ಸನ್ನಹಿತವಾಗದು.
ಗುರುಲಿಂಗ ಜಂಗಮದನುವನರಿರದ ವಿಶ್ವಾಸ,
ಜ್ಞಾನಿಗಲ್ಲದೆ ಅಳವಡದು.
ಆ ಪರಮ ವಿಶ್ವಾಸ ಸತ್ಸದಯದಿಂದಲ್ಲದೆ ಸಮನಿಸದು.
ಇದು ಕಾರಣ, ಪ್ರಸಾದದಾದಿಕುಳವ ನಾನೆತ್ತ ಬಲ್ಲೆನಯ್ಯಾ?
ಪ್ರಸಾದವೆಂಬುದು ಅನಿಂದ್ಯ, ಅಮಲ ಅಗೋಚರ,
ನಿರಂಜನ, ನಿತ್ಯಸತ್ಯ, ಜ್ಞಾನಾನಂದ, ಪರಬ್ರಹ್ಮ, ನಿಶ್ಚಯ.
ಅದು ತನ್ನ ತಾನೆ ನುಡಿವುತ್ತಿಹುದು.
ಆ ನುಡಿಯೆ ಸುನಾದ, ಆ ಸುನಾದವೆ ಓಂಕಾರ.
ಆ ಓಂಕಾರ ತಾನೆ ಮಹಾಜ್ಞಾನ, ಪರಮಚೈತನ್ಯ, ಪ್ರಸಿದ್ಧ ಪಂಚಾಕ್ಷರ.
ಅದೆಂತೆಂದಡೆ:
`ಪ್ರಣವೋ ಹಿ ಪರಬ್ರಹ್ಮ ಪ್ರಣವೋ ಹಿ ಪರಂ ಪದಂ' ಎಂದುದಾಗಿ,
ಆ ಪ್ರಸಿದ್ಧ ಪಂಚಾಕ್ಷರವು ತನ್ನಿಂದ ತಾನೆ ಸಕಲ ನಿಷ್ಕಲವಾಯಿತ್ತು.
ಆ ಪರಮನಿಷ್ಕಲವೇ ಶ್ರೀಗುರು, ಸಕಲವೇ ಲಿಂಗ,
ಸಕಲನಿಷ್ಕಲವೇ ಜಂಗಮ. ಅದೆಂತೆಂದಡೆ:
`ಏಕಮೂರ್ತಿಸ್ತ್ರೀಧಾ ಭೇದಾ ಗುರುರ್ಲಿಂಗಂತು
ಜಂಗಮ' ಎಂದುದಾಗಿ,
ಆ ಜಂಗಮಪ್ರಸಾದವೆ ಮೂಲವಾದ ಕಾರಣ,
ಆ ಜಂಗಮವನಾರಾಧಿಸಿ,
ಅನಂತ ಪ್ರಮಥಗಣಂಗಳು ಪ್ರಸಾದವ ಪಡೆದು,
ತಮ್ಮ ಸದ್ಭಾವವೆಂತಂತೆ ಸ್ವೀಕರಿಸಿದ ಕಾರಣ, ಅನಂತಮುಖವಾಯಿತ್ತು.
ಅವೆಲ್ಲವನೊಳಕೊಂಡು ತಾನೆ ನಿಂದ
ಕಾರಣ ಎಂದಿನಂತಾಯಿತ್ತು.
ಇದೇ ಪ್ರಸಾದದಾದಿ ಮಧ್ಯಾಂತದರಿವು ಕಾಣಿರೆ.
ಇಂತಪ್ಪ ಪ್ರಸಾದವ ಕೊಂಬ ಪ್ರಸಾದಿಯ ನಿಲವೆಂತೆಂದಡೆ :
ವಿಶ್ವಾಸವೆ ಒಡಲಾಗಿ, ಲಿಂಗನಿಷ್ಠೆಯೆ ಇಂದ್ರಿಯಂಗಳಾಗಿ,
ಸಾವಧಾನವೆ ಕರಣಂಗಳಾಗಿ, ಶಿವಾನುಭಾವವೆ ಪ್ರಾಣವಾಗಿ,
ಮಹದಾನಂದವೆ ತಾನಾಗಿ, ಲಿಂಗಸಮರಸವೆ ಭರಿತವಾಗಿರ್ಪ
ಮಹಾಜ್ಞಾನಿಯೆ ಪ್ರಸಾದಿ.
ಆ ಪ್ರಸಾದಿಯ ಪ್ರಸಾದವೆ ಎನ್ನ ಲಿಂಗಕ್ಕೆ ಕಳೆಯಾಯಿತ್ತು.
ಅದೆ ಎನಗೆ ತಿಳಿವಾಯಿತ್ತು, ಮಹಾಲಿಂಗ ಕಲ್ಲೇಶ್ವರಾ.
Art
Manuscript
Music
Courtesy:
Transliteration
Ādiyalli prasāda, ēkamukha sādhakara mukhadinda
anantamukhavādudu.
Eydi nindalli matte ēkamukhavādudu.
Idara bhēdava basavaṇṇa cennabasavaṇṇana sampādaneyindalānaridenu.
Aridaḍēnu enagāyatavāgadu. Āyatavādaḍēnu sannahitavāgadu.
Guruliṅga jaṅgamadanuvanarirada viśvāsa,
jñānigallade aḷavaḍadu.
Ā parama viśvāsa satsadayadindallade samanisadu.
Idu kāraṇa, prasādadādikuḷava nānetta ballenayyā?
Prasādavembudu anindya, amala agōcara,
niran̄jana, nityasatya, jñānānanda, parabrahma, niścaya.
Adu tanna tāne nuḍivuttihudu.
Ā nuḍiye sunāda, ā sunādave ōṅkāra.
Ā ōṅkāra tāne mahājñāna, paramacaitan'ya, prasid'dha pan̄cākṣara.
Adentendaḍe:
`Praṇavō hi parabrahma praṇavō hi paraṁ padaṁ' endudāgi,
ā prasid'dha pan̄cākṣaravu tanninda tāne sakala niṣkalavāyittu.
Ā paramaniṣkalavē śrīguru, sakalavē liṅga,
sakalaniṣkalavē jaṅgama. Adentendaḍe:
`Ēkamūrtistrīdhā bhēdā gururliṅgantu
jaṅgama' endudāgi,
ā jaṅgamaprasādave mūlavāda kāraṇa,
ā jaṅgamavanārādhisi,
ananta pramathagaṇaṅgaḷu prasādava paḍedu,
tam'ma sadbhāvaventante svīkarisida kāraṇa, anantamukhavāyittu.
vellavanoḷakoṇḍu tāne ninda
kāraṇa endinantāyittu.
Idē prasādadādi madhyāntadarivu kāṇire.
Intappa prasādava komba prasādiya nilaventendaḍe:
Viśvāsave oḍalāgi, liṅganiṣṭheye indriyaṅgaḷāgi,
sāvadhānave karaṇaṅgaḷāgi, śivānubhāvave prāṇavāgi,
mahadānandave tānāgi, liṅgasamarasave bharitavāgirpa
mahājñāniye prasādi.
Ā prasādiya prasādave enna liṅgakke kaḷeyāyittu.
Ade enage tiḷivāyittu, mahāliṅga kallēśvarā.