Index   ವಚನ - 72    Search  
 
ಬರಿಯಜ್ಞಾನಿಗಳಾದವರು ಅಂಗದ ಬಲದಲ್ಲಿ ನುಡಿವರು. ಲಿಂಗಾನುಭಾವಿಗಳು ಲಿಂಗದ ಬಲದಲ್ಲಿ ನುಡಿವರು. ಜ್ಞಾನಿಗಳಲ್ಲದ ಸುಜ್ಞಾನಿಗಳಲ್ಲದವರು, ಗಂಡನಿಲ್ಲದ ಮುಂಡೆಯರು, ಹಲಬರನುರುವಂತೆ, ಹಿಂದನರಿಯದೆ ನುಡಿವರು, ಮುಂದನರಿಯದೆ ಅನುಭಾವವ ಮಾಡುವರು. ಸದ್ಭಕ್ತರ ನುಡಿಗಳು ಲಿಂಗದ ನುಡಿಗಳು. ಬರಿಯಜ್ಞಾನಿಗಳ ನುಡಿಗಳು ಗಾಳಿಯ ಶಬ್ದಂಗಳು. ಮತಿಗೆಟ್ಟು, ಅವಗತಿಯಲ್ಲಿ ಕಾಲೂರಿ, ಆಯತಗೆಟ್ಟು ನಾಯನಡೆಯಲ್ಲಿ ನಡೆವರು. ಅವರು ಅನುಭಾವಿಗಳಪ್ಪರೇ? ಅಲ್ಲಲ್ಲ. ಆದೆಂತೆಂದಡೆ: ಸುಜ್ಞಾನಿಗಳಾದಡೆ, ಕಾಮವೆ ಪ್ರಾಣವಾಗಿಹರೆ? ಅನ್ನವೆ ಜ್ಞಾನವಾಗಿಹರೆ? ವರುಣನ ಹೊದಿಕೆಯನೆ ಹೊದೆದು, ಚಂದ್ರಮನ ತೆರೆಯಲೊರಗಿ, ಪರದಾರಕ್ಕೆ ಕೈಯ ನೀಡುವರೆ, ಶರಣಾಗುವರೆ? ಇಂತವರಲ್ಲಯ್ಯ ನಮ್ಮ ಶರಣರುಗಳು. ಇವರುಗಳು ಪಾತಕಿಗಳು, ಆಸೆಯ ಸಮುದ್ರರು, ಅಂಗಶೃಂಗಾರಿಗಳು, ಭವಭಾರಿ ಜೀವಿಗಳು. ಇವರೆಂತು ಸರಿಯಪ್ಪರಯ್ಯ, ಲಿಂಗಾನುಭವಿಗಳಿಗೆ? ಸರ್ವಾಂಗಲಿಂಗಿಗಳಾಗಿರ್ದ ಮಹಾನುಭಾವಿಗಳ ನಿಲುವನು, ಮಹಾಲಿಂಗ ಕಲ್ಲೇಶ್ವರ ಬಲ್ಲನಲ್ಲದೆ, ತೂತಜ್ಞಾನಿಗಳೆತ್ತ ಬಲ್ಲರಯ್ಯ.