Index   ವಚನ - 6    Search  
 
ಬಸವಣ್ಣನೆ ಗುರುವೆಂದರಿಯರಲ್ಲ, ಬಸವಣ್ಣನೆ ಲಿಂಗವೆಂದರಿಯರಲ್ಲ, ಬಸವಣ್ಣನೆ ಕಾರಣವೆಂದರಿಯರಲ್ಲ, ಬಸವಣ್ಣನೆ ಪ್ರಸಾದವೆಂದರಿಯರಲ್ಲ. ಬಸವಣ್ಣನೆ ಗುರುವೆಂದು ಅನುಮಿಷನರಿದ. ಬಸವಣ್ಣನೆ ಲಿಂಗವೆಂದು ಚೆನ್ನಬಸವಣ್ಣನರಿದ. ಬಸವಣ್ಣನೆ ಜಂಗಮವೆಂದು ಪ್ರಭುದೇವರರಿದರು. ಬಸವಣ್ಣನೆ ಪ್ರಸಾದವೆಂದು, ಮರುಳಶಂಕರದೇವರು ಅರಿದು ಆಚರಿಸಿದರು. ಇದು ಕಾರಣ, ಬಸವಣ್ಣನೆ ಗುರು, ಬಸವಣ್ಣನೆ ಲಿಂಗ, ಬಸವಣ್ಣನೆ ಜಂಗಮ, ಬಸವಣ್ಣನೆ ಪ್ರಸಾದವೆಂದರಿಯದ ಅನಾಚಾರಿಗಳ ಎನಗೆ ತೋರದಿರಯ್ಯ, ಗುಹೇಶ್ವರಲಿಂಗದಲ್ಲಿ ಪ್ರಭುವೆ ಸಾಕ್ಷಿಯಾಗಿ ಬಸವಪ್ರಿಯ ಕೂಡಲಸಂಗಮದೇವಾ.