Index   ವಚನ - 4    Search  
 
ಉಲುಹಿಲ್ಲದ ಬ್ರಹ್ಮಾರಣ್ಯದೊಳಗೊಂದು ಮಹಾಲಿಂಗ ಉದಯವಾಯಿತ್ತು ನೋಡಾ! ಆ ಲಿಂಗವ ನೋಡ ಹೋದರೆ, ನೋಡುವ ಕಂಗಳು ತಾವೆ ಲಿಂಗವಾದವಯ್ಯಾ! ಆ ಲಿಂಗವ ಹಸ್ತದಲ್ಲಿ ಮುಟ್ಟಿ ಪೂಜೆಯ ಮಾಡುವೆನೆಂದರೆ, ಆ ಹಸ್ತಗಳು ತಾವೆ ಲಿಂಗವಾದವಯ್ಯಾ! ಆ ಲಿಂಗವ ಭಾವದಲ್ಲಿ ಭಾವಿಸಿಹೆನೆಂದರೆ, ಆ ಭಾವವು ತಾ ಲಿಂಗವಾಯಿತ್ತು ನೋಡಾ! ಇಂತಪ್ಪ ಮಹಾಲಿಂಗವನಪ್ಪಿ ತಾ ಮಹಾಲಿಂಗವಾದ ಬಳಿಕ ಇಂತು ಅದಕೆ ಆವ ಚಿಂತೆ ಹೇಳಾ, ಜಂಗಮಲಿಂಗಪ್ರಭುವೆ.