ಆದಿ ಅನಾದಿಯ ಕೂಡಿದ ಮಹಿಮಂಗೆ
ಆಧಾರವೆ ಆಚಾರಸ್ಥಲ,ಸ್ವಾದಿಷ್ಠಾನವೆ ಗುರುಸ್ಥಲ.
ಮಣಿಪೂರಕವೆ ಲಿಂಗಸ್ಥಲ, ಅನಾಹತವೆ ಜಂಗಮಸ್ಥಲ.
ವಿಶುದ್ಧಿಯೆ ಪ್ರಸಾದಿಸ್ಥಲ, ಆಜ್ಞೇಯವೆ ಆನಂದಸ್ಥಲ.
ಇಂತೀ ಆರು ಸ್ಥಲಂಗಳ ಮೇಳವಾಯಿತ್ತು.
ಮೇಲಣ ಮೂರುಸ್ಥಲಂಗಳ ಮೀರಲರಿಯದೆ
ಸಂಪರ್ಕವ ಮಾಡುವ ಅಣ್ಣಗಳಿಗೆ
ನಾಲ್ಕು ವೇದ, ಹದಿನೆಂಟು ಪುರಾಣ, ಇಪ್ಪತ್ತೆಂಟು ದಿವ್ಯಾಗಮ,
ಮೂವತ್ತೆರಡು ಉಪನಿಷತ್ತು, ಆರು ಶಾಸ್ತ್ರ,
ಮೂವತ್ತೆರಡು ರಾಗ, ಅರುವತ್ತಾರು ಮಿಶ್ರಾರ್ಪಣ.
ಇಂತೀ ಹನ್ನೆರಡು ಸಾವಿರ ಗೀತಪ್ರಬಂಧಕ್ಕೆ
ಮುಖ್ಯವಾದ ಬೀಜ ಒಂದೇ ಓಂಕಾರ ಕಾಣಿಭೋ!
ಆ ಓಂಕಾರಕ್ಕೆ ಸೋಕರ ಸೋಹಂ ಎಂಬ ಮಹಾವೃಕ್ಷ.
ಅದು ಮಹಾಸಾಜದಿಂದ ವೃಕ್ಷವಾಯಿತ್ತು.
ಆ ಸಾಜವೇನು ವೃಕ್ಷವೆ? ಅಲ್ಲ. ಬೀಜವೇ ಅಹಂ.
ಈ ಉಭಯವಿಲ್ಲದೆ ನಿರೂಪಿಸುತ್ತಿರ್ದ ಎಂದುದಾಗಿ
ಭವಿಯೊಳಗೆ ಅಡಗಿರ್ದ ಭಕ್ತ,
ಆ ಭಕ್ತನೊಳಗೆ ಅಡಗಿರ್ದ ಮಾಹೇಶ್ವರ,
ಆ ಮಾಹೇಶ್ವರನೊಳಗೆ ಅಡಗಿರ್ದ ಪ್ರಸಾದಿ,
ಆ ಪ್ರಸಾದಿಯೊಳಗೆ ಅಡಗಿರ್ದ ಪ್ರಾಣಲಿಂಗಿ,
ಆ ಪ್ರಾಣಲಿಂಗಿಯೊಳಗೆ ಅಡಗಿರ್ದ ಶರಣ
ಆ ಶರಣನೊಳಗೆ ಅಡಗಿರ್ದ ಗುರು,
ಆ ಗುರುವಿನೊಳಗೆ ಅಡಗಿರ್ದ ಲಿಂಗ,
ಆ ಲಿಂಗದೊಳಗೆ ಅಡಗಿರ್ದ ಜಂಗಮ,
ಆ ಜಂಗಮದೊಳಗೆ ಅಡಗಿರ್ದ ನಿತ್ಯಮುಕ್ತಿ,
ಆ ನಿತ್ಯಮುಕ್ತಿಯೊಳಗೆ ಅಡಗಿರ್ದ ನಿರಾಳವೆಂಬ ಮಹಾಪ್ರಕಾಶ.
ಇವು ಅಡಗಿರ್ದವು ನಿರ್ವಯಲೆಂಬ ದೇಗುಲದೊಳು.
ಆ ದೇಗುಲವ ಹೊಕ್ಕು, ಬಾಗಿಲವಂ ತಟ್ಟಿ,
ಮೇಗಳ ಶಿಖರವ ಹತ್ತಿ ನೋಡಲಾಗಿ,
ಬೆಳಗು ನಿಬ್ಬೆಳಗು ನಿರ್ಲೇಪ ನಿಃಕಾಯವಾದ
ಲಿಂಗೈಕ್ಯನ ಕರಣಪ್ರಸಾದಕ್ಕೆ
ಆನು ಅಂಗೈಸಿ ಬಂದೆನಯ್ಯಾ,ಜಂಗಮಲಿಂಗಪ್ರಭುವೆ.