ಗುರುವೆ ಎನ್ನ ತನುವಿಂಗೆ ಲಿಂಗದೀಕ್ಷೆಯ ಮಾಡಿ
ಎನ್ನ ಜ್ಞಾನಕ್ಕೆ ಸ್ವಾನುಭಾವದೀಕ್ಷೆಯ ಮಾಡಿ
ಎನ್ನ ತನು ಮನ ಧನದಲ್ಲಿ ವಂಚನೆಯಿಲ್ಲದೆ
ಮಾಡಲೆಂದು ಜಂಗಮದೀಕ್ಷೆಯ ಮಾಡಿ
ಎನ್ನ ಸರ್ವಾಂಗವು ನಿನ್ನ ವಿಶ್ರಾಮಸ್ಥಾನ
ಶುದ್ಧಮಂಟಪವಾದ ಕಾರಣ,
ಲೋಕವ್ಯಾಪ್ತಿಯನರಿಯದೆ
ಲೋಕ ಎನ್ನೊಳಗಾಯಿತ್ತು,
ಆ ಲೋಕಕ್ಕೆ ಹೊರಗಾದೆ.
ಅದೇನು ಕಾರಣ? ಜನನ ಮರಣ
ಪ್ರಳಯಕ್ಕೆ ಹೊರಗಾದೆನಾಗಿ.
ಗುರುವೆ ಸದ್ಗುರುವೆ ಎನ್ನ ಭವದ
ಬೇರ ಹರಿದೆ ಗುರುವೆ,
ಭವಪಾಶವಿಮೋಚ[ನ]ನೆ,
ಅನ್ವಯ ಮನದ ಸರ್ವಾಂಗಲೋಲುಪ್ತ,
ಭುಕ್ತಿಮುಕ್ತಿ ಫಲಪ್ರದಾಯಕ ಗುರುವೆ ಬಸವಣ್ಣ,
ಕಪಿಲಸಿದ್ಧಮಲ್ಲಿಕಾರ್ಜುನ ಚೆನ್ನಬಸವಣ್ಣನಾಗಿ
ಪ್ರಭು ಮೊದಲಾಗಿ ಅಸಂಖ್ಯಾತರನೆಲ್ಲರನು
ತೋರಿದ ಗುರುವೆ.
Transliteration Guruve enna tanuviṅge liṅgadīkṣeya māḍi
enna jñānakke svānubhāvadīkṣeya māḍi
enna tanu mana dhanadalli van̄caneyillade
māḍalendu jaṅgamadīkṣeya māḍi
enna sarvāṅgavu ninna viśrāmasthāna
śud'dhamaṇṭapavāda kāraṇa,
lōkavyāptiyanariyade
lōka ennoḷagāyitu,
ā lōkakke horagāde.
Adēnu kāraṇa? Janana maraṇa
praḷayakke horagādenāgi.
Guruve sadguruve enna bhavada
bēra haride guruve,
bhavapāśavimōca[na]ne,
anvaya manada sarvāṅgalōlupta,
bhuktimukti phalapradāyaka guruve basavaṇṇa,
kapilasid'dhamallikārjuna cennabasavaṇṇanāgi
prabhu modalāgi asaṅkhyātaranellaranu
tōrida guruve.