ತರುಗಳ ಮುರಿದು ಗಗನಕ್ಕೀಡಾಡುವ
ಅನಿಲರೂಪೋ ನಿರೂಪೋ? ಬಲ್ಲಡೆ ನೀವು ಹೇಳಿ ಭೋ!
ಗಜ ಸಿಂಹ ಶಾರ್ದೂಲವೆಂಬ ಅಧಿಕ ಮೃಗಂಗಳ
ಮುರಿದೊತ್ತಿ ಕೆಡಹುತಿಪ್ಪ
ವ್ಯಾಧಿರೂಪೋ ನಿರೂಪೋ? ಬಲ್ಲಡೆ ನೀವು ಹೇಳಿ ಭೋ!
ಕಾಣಲೀಯದೆ ಕೇಳಲೀಯದೆ ಅವಧಾನಂಗಳ ಕೆಡಿಸುತ್ತಿರ್ಪ
ನಿದ್ರೆ ರೂಪೋ ನಿರೂಪೋ? ಬಲ್ಲಡೆ ನೀವು ಹೇಳಿ ಭೋ!
ಇಂತು ಆಳಿನಾಳಿನ ಅಂತಸ್ಥವನಾರಿಗೂ ಅರಿಯಬಾರದು.
ಅನಾದಿಮೂಲದೊಡೆಯನ ಬಲ್ಲೆನೆಂಬ ಪರಿ ಎಂತೋ?
ರೂಪೆಂದಡೆ ಶಬ್ದ, ನಿರೂಪೆಂದಡೆ ಶೂನ್ಯ;
ಈ ಎರಡರ ಆದಿಯಿಂದತ್ತತ್ತ ಕಾಣಾ.
ಎನ್ನ ತಂದೆ ಕಪಿಲಸಿದ್ಧಮಲ್ಲಿಕಾರ್ಜುನಲಿಂಗವು
ಗುರುಕಾರುಣ್ಯವುಳ್ಳವರಿಗಲ್ಲದೆ ಅರಿಯಬಾರದು.