ವಚನ - 606     
 
ತಾಮಸಿಯ ಕೂಟದಲ್ಲಿ ತಾಮಸಿ ನಾನಾದೆ ಸಾಮಪ್ರಭೆಯಲ್ಲಿ ಶುದ್ಧ ಮುಗ್ಧನಾದೆ ನಾನಾ ಕಳಾಭೇದ ತಾನು ನೀನಾಗಿ ಊರು ಆರರ ಅತಿ ಸಂಬಂಧದ ಹಲವು ಮೂರನೆ ಬಿತ್ತಿ ಫಲವು ಮತ್ತೊಂದಾಗಿ ಒದವಿತ್ತು. ತುರಿಯದಾ ಸಂಯೋಗಕೆ ಸಾನಂದಜ್ಯೋತಿಯಲಿ ತಾನು ತಾನೊಂದಾಗಿ ಭಾನುವಿನ ಉದಯದಲಿ ಅನುಭವಿಸಿದ ಸಾಮ ಶುದ್ದಾಂಗದಲಿ ನಾನಾ ಧವಳ ಮನೆಯ ಕಾರಣದಲಿ ಮುಕ್ತಿ ಮೂರ್ಛೆವೋಗಿ ಪರಮ ಹರುಷದಲೀಗ ಉರುತರಂ ಕೈವಲ್ಯ ಒದವಿ ನಾ ನೀನಾದೆ. ಸದುಹೃದಯದಾ ಕಪಿಲಸಿದ್ಧಮಲ್ಲಿಕಾರ್ಜುನ ಗುರುವಾಗಿ ಬಂದೀಗ ಭವದ ಬೇರನು ಹರಿದ ನಿಶ್ಚಯಾರ್ಥದಿಂ.