ಯೋಗವನರಿದೆನೆಂಬೆ, ಯೋಗವನರಿದೆನೆಂಬೆ ;
ಯೋಗದ ನೆಲೆಯನಾರು ಬಲ್ಲರು?
ಯೋಗದ ನೆಲೆಯ ಹೇಳಿಹೆ ಕೇಳಾ-
ತಾತ್ಪರ್ಯಕರ್ಣಿಕೆಯ ಮಸ್ತಕದಲ್ಲಿದ್ದ ಕುಂಭದೊಳಗೆ ತೋರುತ್ತಿದೆ;
ಹಲವು ಬಿಂಬ ಹೋಗುತ್ತಿದೆ, ಹಲವು ರೂಪ ಒಪ್ಪುತ್ತಿದೆ ;
ಏಕ ಏಕವಾಗಿ ಆನಂದಸ್ಥಾನದಲ್ಲಿ ಅನಿಮಿಷವಾಗುತ್ತಿದೆ ;
ಪೂರ್ವಾಪರ ಮಧ್ಯ ಶುದ್ಧ ಪಂಚಮವೆಂಬ ಸ್ಥಾನಂಗಳಲ್ಲಿ
ಪ್ರವೇಶಿಸುತ್ತಿದೆ ತಾನು ತಾನೆಯಾಗಿ.
ಅರಿಯಾ ಭೇದಂಗಳ-
ಬಿಂದು ಶ್ವೇತ ಪೂರ್ವಶುದ್ಧ ಆನಂದ ಧವಳ ಅನಿಮಿಷ ಸಂಗಮ
ಶುದ್ಧ ಸಿದ್ಧ ಪ್ರಸಿದ್ಧ ತತ್ವವೆಂಬ ಪರಮಸೀಮೆ ಮುಖಂಗಳಾಗಿ,
ಅಜಲೋಕದಲ್ಲಿ ಅದ್ವಯ, ನೆನಹಿನ ಕೊನೆಯ ಮೊನೆಯಲ್ಲಿ
ಒಪ್ಪಿ ತೋರುವ
ಧವಳತೆಯ ಬೆಳಗಿನ ರಂಜನ ಪ್ರವಾಹ ಮಿಗಿಲಾಗಿ,
`ತ್ವಂ' ಪದವಾಯಿತ್ತು, ಮೀರಿ `ತ್ವಮಸಿ'ಯಾಯಿತ್ತು
ಕಪಿಲಸಿದ್ಧಮಲ್ಲಿಕಾರ್ಜುನನೆಂಬ
ನಾಮವ ನುಂಗಿ ಲೀಯವಾಯಿತ್ತು.
Transliteration Yōgavanaridenembe, yōgavanaridenembe;
yōgada neleyanāru ballaru?
Yōgada neleya hēḷihe kēḷā-
tātparyakarṇikeya mastakadallidda kumbhadoḷage tōruttide;
halavu bimba hōguttide, halavu rūpa opputtide;
ēka ēkavāgi ānandasthānadalli animiṣavāguttide;
pūrvāpara madhya śud'dha pan̄camavemba sthānagaḷalli
tānu tāneyāgi pravēśisuttide.
Ariya bhēdaṅgaḷa-
bindu śvēta pūrvaśud'dha ānanda dhavaḷa animiṣa saṅgama
śud'dha sid'dha prasid'dha tatvavemba paramasīme mukhagaḷāgi,
ajalōkadalli advaya, nenahina koneya moneyalli
oppi tōruva
dhavaḷateya beḷagina ran̄jana pravāha migilāgi,
`tvaṁ' padavāyittu, mīri `tvamasi'yāyittu
kapilasid'dhamallikārjunanemba
nāmava nuṅgi līyavāyittu.