ವಚನ - 984     
 
ವೇದಂಗಳು ದೈವವಾದಡೆ ಕುಕ್ಕುರ ಕುದುರೆಗಳಾಗಲೇಕೋ? ಶಾಸ್ತ್ರಂಗಳು ದೈವವಾದಡೆ ಹೊರಜು ಕಣ್ಣಿಗಳಾಗಲೇಕೋ? ಆಗಮಂಗಳು ದೈವವಾದಡೆ ಕೀಲುಗಲಣಿಕೆಗಳಾಗಲೇಕೋ? ಪುರಾಣಂಗಳು ದೈವವಾದಡೆ ಅಚ್ಚು ಹೊರಜೆಯಾಗಲೇಕೋ? ಚಂದ್ರಸೂರ್ಯರು ದೈವವಾದಡೆ ಗಾಲಿಗಳಾಗಲೇಕೋ? ಇವ ಹಿಡಿದಾಡಿ ಭಜಿಸಿ ಪೂಜೆಮಾಡಿದವರು ದೈವವಾದಡೆ, ಪುಣ್ಯ-ಪಾಪಕ್ಕೀಡಾಗಲೇಕೋ? ಇದು ಕಾರಣ, ವೇದಂಗಳು ದೈವವಲ್ಲ, ಶಾಸ್ತ್ರಂಗಳು ದೈವವಲ್ಲ, ಆಗಮಂಗಳು ದೈವವಲ್ಲ, ಪುರಾಣಂಗಳು ದೈವವಲ್ಲ, ಚಂದ್ರ ಸೂರ್ಯರು ದೈವವಲ್ಲ, ಆತ್ಮನು ದೈವವಲ್ಲ, ಕಪಿಲಸಿದ್ಧಮಲ್ಲಿಕಾರ್ಜುನಾ, ನೀನೊಬ್ಬನೇ ದೈವ.