ವಚನ - 993     
 
ಶಿವತತ್ವ ಐದು ಅವಾವೆಂದಡೆ; ಶಿವ, ಶಕ್ತಿ, ಸಾದಾಖ್ಯ, ಈಶ್ವರ, ಶುದ್ಧವಿದ್ಯೆ- ಇಂತು ಶಿವತತ್ತ್ವ ಐದು. ಇನ್ನು ವಿದ್ಯಾತತ್ತ್ವವೆಂತೆಂದಡೆ: ಕಲೆ, ರಾಗ, ನಿಯತಿ, ವಿದ್ಯೆ, ಪುರುಷ, ಪ್ರಕೃತಿ - ಇಂತು ವಿದ್ಯಾತತ್ತ್ವ ಏಳು. ಇನ್ನು ಕರಣಂಗಳೆಂತೆಂದಡೆ: ಚಿತ್ತ, ಬುದ್ಧಿ, ಅಹಂಕಾರ, ಮನ - ಇವು ಕರಣತತ್ತ್ವ ನಾಲ್ಕು. ಇನ್ನು ಇಂದ್ರಿಯಂಗಳೆಂತೆಂದಡೆ: ಶ್ರೋತ್ರ, ತ್ವಕ್ಕು, ನೇತ್ರ, ಜಿಹ್ವೆ, ಘ್ರಾಣ - ಇಂತು ಬುದ್ಧೀಂದ್ರಿಯಂಗಳು ಐದು. ಇನ್ನು ಕರ್ಮೇಂದ್ರಿಯಂಗಳೆಂತೆಂದಡೆ: ವಾಕ್ಕು, ಪಾದ, ಪಾಣಿ, ಗುಹ್ಯ, ಪಾಯು - ಇಂತು ಕರ್ಮೇಂದ್ರಿಯಂಗಳು ಐದು. ಇನ್ನು ತನ್ಮಾತ್ರಂಗಳೆಂತೆಂದಡೆ: ಶಬ್ದ, ಸ್ಪರ್ಶ, ರೂಪು, ರಸ, ಗಂಧ - ಇಂತು ಜ್ಞಾನೇಂದ್ರಿಯ ವಿಷಯ ಐದು. ಇನ್ನು ಕರ್ಮೇಂದ್ರಿಯ ವಿಷಯವೆಂತೆಂದಡೆ: ವಚನ, ಗಮನ, ಆದಾನ, ಆನಂದ, ವಿಸರ್ಜನ ಇಂತು ಕರ್ಮೇಂದ್ರಿಯ ವಿಷಯ ಐದು. ಇನ್ನು ವಾಕ್ಕುಗಳಾವುವೆಂದಡೆ: ಪರಾ, ಪಶ್ಯಂತಿ, ಮಧ್ಯಮೆ, ವೈಖರಿ - ಇಂತು ವಾಕ್ಕು ನಾಲ್ಕು. ಸಾತ್ಪಿಕ, ರಾಜಸ, ತಾಮಸ - ಇಂತು ಗುಣ ಮೂರು. ರಾಜಸಹಂಕಾರ, ವೈಖರಿಯಹಂಕಾರ, ಭೂತಾದಿಯಹಂಕಾರ -ಇಂತು ಅಹಂಕಾರ ಮೂರು. ಪೃಥ್ವಿ, ಅಪ್ಪು, ಅಗ್ನಿ, ವಾಯು, ಆಕಾಶ - ಇಂತು ಭೂತಂಗಳು ಐದು. ಭೂತಕಾರ್ಯ ಇಪ್ಪತ್ತೈದು - ಅವಾವೆಂದಡೆ: ಅಸ್ಥಿ, ಮಾಂಸ, ತ್ವಕ್, ನಾಡಿ, ರೋಮ - ಈ ಐದು ಪೃಥ್ವೀಪಂಚಕ. ಲಾಲಾ, ಮೂತ್ರ, ಸ್ವೇದ, ಶುಕ್ಲ, ಶೋಣಿತ - ಈ ಐದು ಅಪ್ಪುವಿನ ಪಂಚಕ. ಕ್ಷುಧೆ, ತೃಷೆ, ನಿದ್ರೆ, ಆಲಸ್ಯ, ಸ್ತ್ರೀಸಂಗ - ಈ ಐದು ಅಗ್ನಿಪಂಚಕ. ಪರಿವ, ಪಾರುವ, ಸುಳಿವ, ನಿಲುವ, ಅಗಲುವ - ಈ ಐದು ವಾಯುಪಂಚಕ. ರಾಗ, ದ್ವೇಷ, ಭಯ, ಲಜ್ಜೆ, ಮೋಹ - ಈ ಐದು ಆಕಾಶವಂಚಕ. ಇಂತೀ ಇಪ್ಪತ್ತೈದು ಭೂತಕಾರ್ಯ ಪಂಚೀಕೃತಗಳು. ಇನ್ನು ದಶವಾಯುಗಳು: ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯ - ಈ ಹತ್ತು ವಾಯುಗಳು, ಇನ್ನು ದಶನಾಡಿಗಳು: ಇಡಾ, ಪಿಂಗಳಾ, ಸುಷುಮ್ನಾ, ಗಾಂಧಾರಿ, ಹಸ್ತಿ, ಜಿಹ್ವೆ, ಪುಷ್ಕರ, ಪಯಸ್ವಿನಿ, ಆಲಂಬು, ಲಕುಹ, ಶಂಕಿನಿ – ಇಂತೀ ಹತ್ತು ನಾಡಿಗಳು. ಇಂತು ತತ್ತ್ವ ತೊಂಬತ್ತಾರು ಕೂಡಿಕೊಂಡು ಆತ್ಮನು ಭೂಮಧ್ಯದಲ್ಲಿರ್ದು ಅವಸ್ಥೆಬಡುವುದನು ಹೇಳಿಹೆನು. ಅದೆಂತೆಂದಡೆ ಅವಸ್ಥೆಯ ಕ್ರಮ: ಪ್ರೇರಕಾವಸ್ಥೆ ಒಂದು, ಅಧೋವಸ್ಥೆ ಐದು, ಊರ್ಧ್ವಾವಸ್ಥೆ ಐದು, ಮಧ್ಯಾವಸ್ಥೆ ಐದು, ಕೇವಲಾವಸ್ಥೆ ಒಂದು, ಸಕಲಾವಸ್ಥೆ ಒಂದು, ಶುದ್ಧಾವಸ್ಥೆ ಒಂದು, ನಿರ್ಮಲಾವಸ್ಥೆ ಐದು, ಅಂತೂ ಅವಸ್ಥೆ ಇಪ್ಪತ್ತನಾಲ್ಕು, ಅವರಲ್ಲಿ ಪ್ರೇರಕಾವಸ್ಥೆಯೆಂತೆಂದಡೆ: ತತ್ತ್ವಸಮೂಹಂಗಳನು ಕೂಡಿಕೊಂಡು ಇರ್ದಲ್ಲಿ ಆ ಪುರುಷನು ಪಂಚೇಂದ್ರಿಯಂಗಳಲ್ಲಿ ವಿಷಯಂಗಳನು ಅತಿ ಚಮತ್ಕಾರದಲ್ಲಿ ಅರಿವವೇಳೆ ಪ್ರೇರಕಾವಸ್ಥೆಯೆಂದು. ಅದಕ್ಕೆ ಪ್ರೇರಿಸುವ ತತ್ತ್ವಂಗಳಾವುವೆಂದಡೆ- ಶಿವತತ್ತ್ವ ಐದು, ವಿದ್ಯಾತತ್ತ್ವ ಏಳು, ಕರಣಂಗಳು ನಾಲ್ಕು, ಭೂತಂಗಳಲ್ಲಿ ಒಂದು, ಇಂದ್ರಿಯಂಗಳಲ್ಲಿ ಒಂದು -ಇಂತೀ ಹದಿನೆಂಟು ತತ್ವಂಗಳಲ್ಲಿ ವಿಷಯಂಗಳನರಿವನು. ಅದು ಹೇಗೆಂದಡೆ - ಶಿವತತ್ತ್ವ ಐದು, ವಿದ್ಯಾತತ್ತ್ವ ಏಳು, ಕರಣಂಗಳು ನಾಲ್ಕು - ಇಂತು ಹದಿನಾರು ತತ್ತ್ವ. ಆಕಾಶಭೂತವೂ ಶ್ರೋತ್ರೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ ಶಬ್ದವನರಿವ; ವಾಯುಭೂತವೂ ತ್ವಗೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ ಸೋಂಕನರಿವ; ತೇಜಭೂತವೂ ನಯನೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ ರೂಪವನರಿವ; ಅಪ್ಪುಭೂತವೂ ಜಿಹ್ವೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ ರಸವನರಿವ; ಪೃಥ್ವಿಭೂತವೂ ಘ್ರಾಣೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ ಗಂಧವನರಿವ. ಇಂತೀ ವಿಷಯಂಗಳನರಿವುದು. ಇದು ಪ್ರೇರಕಾವಸ್ಥೆಯೆಂದೆನಿಸುವದು. ಇನ್ನು ಅಧೋವಸ್ಥೆ ಐದಕ್ಕೆ ವಿವರ: ಪ್ರಥಮದಲ್ಲಿ ಜಾಗ್ರಾವಸ್ಥೆ ಅದಕ್ಕೆ ಪ್ರೇರಿಸುವ ತತ್ತ್ವಂಗಳು ಬಿಟ್ಟಿಹವಾವುವೆಂದಡೆ: ಶಿವತತ್ತ್ವ ಐದು, ಮಾಯಾತತ್ತ್ವ ಒಂದು, ವಿದ್ಯಾತತ್ತ್ವ ಆರು, ಭೂತಂಗಳು ಐದು ಇಂತು ಹದಿನೇಳು ಬಿಟ್ಟಿಹುದು. ಇನ್ನು ಜಾಗ್ರಾವಸ್ಥೆಯಲ್ಲಿಹ ತತ್ತ್ವಗಳೆಷ್ಟೆಂದಡೆ: ಕರಣ ನಾಲ್ಕು, ಬುದ್ಧೀಂದ್ರಿಯ ಐದು, ಕರ್ಮೇಂದ್ರಿಯ ಐದು, ವಿಷಯ ಹತ್ತು, ವಾಯು ಹತ್ತು. ಇಂತು ಮೂವತ್ತನಾಲ್ಕು ತತ್ತ್ವಂಗಳಲ್ಲಿ ಆ ತನು ಕೇಳದೆ ಕೇಳುವ, ಮಾತಾಡದ ಹಾಂಗೆ ಆಲಸ್ಯದಲ್ಲಿ ಮಾತನಾಡುತ್ತಿಹನು, ಇಂತು ಜಾಗ್ರಾವಸ್ಥೆ. ಇನ್ನು ಸ್ವಪ್ನಾವಸ್ಥೆ. ಅದಕ್ಕೆ ಹತ್ತು ತತ್ತ್ವಂಗಳು ಬಿಟ್ಟಿಹವು. ಅವಾವುವೆಂದಡೆ: ಬುದ್ಧೀಂದ್ರಿಯ ಐದು, ಕರ್ಮೇಂದ್ರಿಯ ಐದು. ಲಲಾಟದಲ್ಲಿ ನಿಲುವು ಕಂಠಸ್ಥಾನದಲ್ಲಿ ಇಪ್ಪತ್ತೈದು ತತ್ತ್ವಂಗಳು ಕೂಡಿಕೊಂಡಿಹುದು. ಅದೆಂತೆಂದಡೆ:ಮಾಯೆ ಒಂದು, ವಾಯು ಹತ್ತು, ವಿಷಯ ಹತ್ತು, ಕರಣ ನಾಲ್ಕು ಇಂತು ಇಪ್ಪತ್ತೈದು ತತ್ತ್ವಂಗಳು ಕೂಡಿಕೊಂಡು ಸ್ವಪ್ನಂಗಳ ಕಾಣುತಿಹನು. ಇದು ಸ್ವಪ್ನಾವಸ್ಥೆ. ಇನ್ನು ಸುಷುಪ್ತಾವಸ್ಥೆಗೆ ಬಹಲ್ಲಿ ಕಂಠಸ್ಥಾನದಲ್ಲಿ ನಿಂದ ತತ್ತ್ವಂಗಳಾವಾವವೆಂದಡೆ- ಮಾಯೆ ಒಂದು, ವಾಯು ಒಂಬತ್ತು ವಿಷಯ ಹತ್ತು, ಕರಣ ಮೂರು- ಇಂತು ಇಪ್ಪತ್ತಮೂರು ತತ್ತ್ವ, ಇನ್ನು ಹೃದಯಸ್ಥಾನದಲ್ಲಿ ಕೂಡಿಹ ತತ್ತ್ವ ಆವಾವೆಂದಡೆ: ಪ್ರಾಣವಾಯು ಒಂದು, ಪ್ರಕೃತಿ ಒಂದು, ಚಿತ್ತ ಒಂದು -ಇಂತು ಸುಷುಪ್ತಾವಸ್ಥೆಯಲ್ಲಿ ತತ್ತ್ವ. ಇನ್ನು ತೂರ್ಯಾವಸ್ಥೆಗೆ ಬಹಾಗ ಹೃದಯದಲ್ಲಿ ನಿಂದ ತತ್ತ್ವ ಚಿತ್ತ ಒಂದು. ನಾಭಿಸ್ಥಾನದಲ್ಲಿ ತೂರ್ಯಾವಸ್ಥೆಯಲ್ಲಿಹ ತತ್ತ್ವ ಪ್ರಾಣವಾಯು ಒಂದು, ಪ್ರಕೃತಿ ಒಂದು. ಅತೀತಾವಸ್ಥೆಗೆ ಹೋಹಾಗ ನಾಭಿಸ್ಥಾನದಲ್ಲಿ ತೂರ್ಯಾವಸ್ಥೆಯಲ್ಲಿ ಪ್ರಾಣವಾಯುವುಳಿದು ಅತೀತಾವಸ್ಥೆಯಲ್ಲಿ ಪ್ರಕೃತಿಗೂಡಿ ಮೂಲಾಧಾರದಲ್ಲಿ ಆಣವಮಲಯುಕ್ತವಾಗಿ ಏನೆಂದರಿಯದೆ ಇಹುದು, ಇಂತಿದು ಅಧೋವಸ್ಥೆ. ಇನ್ನು ಊರ್ಧ್ವಾವಸ್ಥೆ, ಅತೀತದಲ್ಲಿ ಪ್ರಕೃತಿಕಾರ್ಯಂಗಳೆಲ್ಲವನೂ ಬಿಟ್ಟು, ತತ್ತ್ವಂಗಳೊಂದೂ ಇಲ್ಲದೆ, ಅಣವಮಲಸ್ವರೂಪವಾಗಿ ಮೂಲಾಧಾರದಲ್ಲಿ ಬಿದ್ದಿರ್ದ ಆತ್ಮನಿಗೆ ಪರಮೇಶ್ವರನ ಕರುಣದಿಂದ ಕ್ರಿಯಾಶಕ್ತಿ, ಶಕ್ತಿತತ್ತ್ವಮಂ ಪ್ರೇರಿಸುವುದು. ಆ ಶಕ್ತಿ ಕಲೆ, ಕಾಲ, ನಿಯತಿಗಳಂ ಪ್ರೇರಿಸುವುದು. ಆ ವೇಳೆಯಲ್ಲಿ ಸೂಕ್ಷ್ಮೆಯೆಂಬ ವಾಕ್ಕು ಕೂಡುವುದು. ಇಂತು ಅತೀತದಲ್ಲಿ ಅರುಹಿಸುವ ತತ್ತ್ವಂಗಳು: ಶಕ್ತಿತತ್ತ್ವ, ಕಲೆ, ಕಾಲ, ನಿಯತಿ, ಸೂಕ್ಷ್ಮೆ ಇಂತು ತತ್ತ್ವಂಗಳು ಐದು. ಇನ್ನು ತೂರ್ಯಾವಸ್ಥೆಗೆ ಬಹಾಗ ಹಿಂದೆ ಹೇಳಿದ ತತ್ತ್ವ ಐದು, ಪಶ್ಯಂತಿಯೆಂಬ ವಾಕ್ಕು, ಪ್ರಾಣವಾಯು ಕೂಡಿ ತತ್ತ್ವ ಏಳು ತೂರ್ಯಾವಸ್ಥೆಯಲ್ಲಿ ಪ್ರೇರಿಸುವುದು: ಹಿಂದೆ ಹೇಳಿದ ತತ್ತ್ವ ಏಳು ಕೂಡಿ, ಹೃದಯಸ್ಥಾನದಲ್ಲಿ ಮಧ್ಯಮೆ, ಚಿತ್ತ - ಎರಡು ಕೂಡುತ್ತಿಹವು. ಆ ವೇಳೆಯಲ್ಲಿ ಜ್ಞಾನಶಕ್ತಿ ಶುದ್ಧವಿದ್ಯಾತತ್ತ್ವಮಂ ಪ್ರೇರಿಸುವುದು. ಆ ಶುದ್ಧವಿದ್ಯಾತತ್ತ್ವ ಆತ್ಮಂಗೆ ಅರಿವನೆಬ್ಬಿಸುವುದು. ಇಚ್ಛಾಶಕ್ತಿ ಈಶ್ವರತತ್ತ್ವಮಂ ಪ್ರೇರಿಸುವುದು; ಈಶ್ವರತತ್ತ್ವ ರಾಗತತ್ತ್ವಮಂ ಪ್ರೇರಿಸುವುದು; ರಾಗತತ್ತ್ವ ಆತ್ಮಂಗೆ ಇಚ್ಛೆಯನೆಬ್ಬಿಸುವುದು. ಆದಿಶಕ್ತಿ ಸಾದಾಖ್ಯತತ್ತ್ವಮಂ ಪ್ರೇರಿಸುವುದು; ಸಾದಾಖ್ಯತತ್ತ್ವ ಪ್ರಕ್ಕೃತಿತತ್ತ್ವಮಂ ಪ್ರೇರಿಸುವುದು; ಪರಾಶಕ್ತಿ ಶಿವತತ್ತ್ವಮಂ ಪ್ರೇರಿಸುವುದು; ಶಿವತತ್ತ್ವ ಗುಣತತ್ತ್ವಮಂ ಪ್ರೇರಿಸುವುದು. ಇಂತು ಹದಿನೆಂಟು ತತ್ತ್ವ ಅವಾವವೆಂದಡೆ: ಪಂಚಶಕ್ತಿ ಹೊರಗಾಗಿ ಶಿವತತ್ತ್ವ ಐದು, ವಿದ್ಯಾತತ್ತ್ವ ಐದು, ಪ್ರಾಣವಾಯು ಒಂದು, ಪ್ರಕೃತಿ ಒಂದು, ಗುಣ ಮೂರು, ಚಿತ್ತ ಒಂದು, ಪುರುಷ ಒಂದು. ಇಂತು ತತ್ತ್ವ ಹದಿನೇಳು ಸುಷುಪ್ತಾವಸ್ಥೆಯಲ್ಲಿ ಅರುಹಿಸುವವು. ಇನ್ನು ಸ್ವಪ್ನಾವಸ್ಥೆಯ ಕಂಠದಲ್ಲಿಹ ತತ್ತ್ವ: ಜ್ಞಾನೇಂದ್ರಿಯ ವಿಷಯ ಹತ್ತು, ಕರ್ಮೇಂದ್ರಿಯ ವಿಷಯ ಹತ್ತು, ಪ್ರಾಣವಾಯು ಉಳಿಯೆ, ವಾಯುಚಿತ್ತ ಉಳಿಯೆ, ತ್ರಿಕರಣ ಅಹಂಕಾರ ಮೂರು, ವೈಖರಿಯ ವಾಕ್ಕು ಒಂದು ಇಂತು ಇಪ್ಪತ್ತನಾಲ್ಕು ತತ್ತ್ವ. ಸುಷುಪ್ತಾವಸ್ಥೆಯಲ್ಲಿ ಹಿಂದೆ ಹೇಳಿದ ತತ್ತ್ವ ಹದಿನೇಳು ಕೂಡಿ ತತ್ತ್ವ ನಲವತ್ತೊಂದು ಸ್ವಪ್ನಾವಸ್ಥೆಯಲ್ಲಿ ಕೂಡಿಹವು. ಆಗ ತನ್ನೊಳಗೆ ಅರುಹಿಸುವ ಪ್ರಕಾರವೆಂತೆಂದಡೆ: ಚಿತ್ತ, ಬುದ್ಧಿ, ಅಹಂಕಾರ, ಮನ, ಹೃದಯ ಈ ಐದು. ಚಿತ್ತವನು ಅಕಾರ ಪ್ರೇರಿಸುವುದು. ಆ ಅಕಾರವನು ಬ್ರಹ್ಮ ಪ್ರೇರಿಸುವನು, ಬುದ್ಧಿಯನು ಉಕಾರ ಪ್ರೇರಿಸುವುದು; ಉಕಾರವನು ವಿಷ್ಣು ಪ್ರೇರಿಸುವನು, ಅಹಂಕಾರವನು ಮಕಾರ ಪ್ರೇರಿಸುವುದು; ಮಕಾರವನು ರುದ್ರ ಪ್ರೇರಿಸುವನು, ಮನವನು ಬಿಂದು ಪ್ರೇರಿಸುವುದು; ಬಿಂದುವನು ಈಶ್ವರ ಪ್ರೇರಿಸುವನು; ಹೃದಯವನು ನಾದ ಪ್ರೇರಿಸುವುದು; ನಾದವನು ಸದಾಶಿವ ಪ್ರೇರಿಸುವನು. ಈ ಹದಿನೈದು ತನ್ನೊಳಗೆ ಸೂಕ್ಷ್ಮಶರೀರದಲ್ಲಿಹುದು. ...........ಗೀ(?) ಅಷ್ಟತನುವಿನಿಂದ ಸ್ವರ್ಗನರಕವನರಿವನು. ಮುಂದ