ವಚನ - 1294     
 
ಶುದ್ಧ ಸಿದ್ಧ ಪ್ರಸಿದ್ಧದ ನೆಲೆಯನರಿದೆಹೆನೆಂದು ತೊಳಲಿ ಬಂದೆ ಗಿರಿಗಹ್ವರದೊಳಗೆ. ಕಂಡೆ ಕಾಣೆನೆಂಬ ಸಂಶಯವಾಯಿತ್ತು. ಅದೇನು ಕಾರಣ? ನಿನ್ನವರ ಗಣಸಮೂಹಕ್ಕೆ ತಾತ್ಪರ್ಯವ ಒಲ್ಲರಾಗಿ. ನೀನು ಸದ್ಭಕ್ತದೇಹಿಕನಾಗಿ ಸದ್ಭಕ್ತರಲ್ಲಿ ಒಚ್ಚತವೋಗಿ ಇಪ್ಪೆಯಾಗಿ, ಇಪ್ಪಾ ಗಿರಿಗಹ್ವರದಲ್ಲಿ ಗುರುವಿನ ಕರುಣದಿಂದ ಕಂಡೆ ನೀನಿಪ್ಪ ನೆಲೆಯ. ಶುದ್ಧವ ಗುರುವಿನಲ್ಲಿ, ಸಿದ್ಧವ ಲಿಂಗದಲ್ಲಿ, ಪ್ರಸಿದ್ಧವ ಜಂಗಮದಲ್ಲಿ ಕಂಡೆ, ಅರಿದೆ, ನಚ್ಚಿದೆ, ಮಚ್ಚಿದೆ. ಎನ್ನ ಸರ್ವ ಸ್ವಾಯತವನೊಚ್ಚತಗೊಟ್ಟೆ, ನಿನ್ನ ಗಣಸಮೂಹಕ್ಕೆ ಪ್ರಾಪ್ತನಾದೆ, ನಿನ್ನ ಭಕ್ತರ ಸಲುಗೆಗೆ ಸಂದೆ, ಕಪಿಲಸಿದ್ಧಮಲ್ಲಿಕಾರ್ಜುನ ತಂದೆ.