•  
  •  
  •  
  •  
Index   ವಚನ - 1394    Search  
 
ಜಲದಲ್ಲಿ ನೊರೆ ತೆರೆ ಬುದ್ಬುದವಿದ್ದಂತೆ, ಕನಕದಲ್ಲಿ ಅಲಂಕಾರವಿದ್ದಂತೆ, ಬೀಜದಲ್ಲಿ ಎಲೆ ಶಾಖೆ ಬೀಜವಿದ್ದಂತೆ ಒಂದೆ ವಸ್ತುವಿನಲ್ಲಿ ಗುಣತ್ರಯವಾದವು; ಗುಣತ್ರಯದಿಂದ ಮಲತ್ರಯಂಗಳಾದವು; ಮಲತ್ರಯಂಗಳಿಂದ ಲೋಕರಚನೆ ಹೆಚ್ಚಿತ್ತು; ಲೋಕರಚನೆ ಹೆಚ್ಚಿದಲ್ಲಿ ಪಾಪಪುಣ್ಯಂಗಳಾದವು; ಪಾಪಪುಣ್ಯಂಗಳಿಂದ ಸ್ವರ್ಗನರಕಂಗಳಾದವು; ಸ್ವರ್ಗನರಕಂಗಳಿಂದ ಭೇದವಾಗಿಯಾಗಿ ಕೆಟ್ಟ ಕೇಡ ನೋಡಿ ತನ್ನ ಮಾಯೆಯ ಸೆಳೆದನು. ಮಾಯೆಯ ಸೆಳೆದಲ್ಲಿ, ಸರ್ವವು ಲಯವಾಗಿ ನೀನೊಬ್ಬನೆ ಉಳಿದೆ. ಉಳಿದೆ ಎಂಬುದು ಶಾಸ್ತ್ರಪ್ರಸಿದ್ಧ- ಸಮುದ್ರದ ನೀರು ಮೇಘವಾಗಿ, ಮೇಘದ ನೀರು ಹಳ್ಳಕೊಳ್ಳವಾಗಿ, ಮತ್ತೆ ಸಮುದ್ರವಾದಂತೆ. ಅದರಂತೆ ಒಂದೆ ಸ್ಥಲದಲ್ಲಿ ನಿಂತು ನೋಡಲೊಲ್ಲದೆ, ಅನೇಕ ಸ್ಥಾನಗಳ ಧರಿಸಿ ಹೋಗುವುದದು ಉಚಿತವಲ್ಲ, ಎಲೆ ಜೀವವೆ ಎಂದು ಬೋಧಿಸಿದ ಸದ್ಗುರು ಚೆನ್ನಬಸವಣ್ಣನ ಪಾದಕ್ಕೆ ನಮೋ ನಮೋ ಎಂದು ಬದುಕಿದೆನಯ್ಯಾ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Jaladalli nore tere budbudaviddante, kanakadalli alaṅkāraviddante, bījadalli ele śākhe iddante onde vastuvinalli guṇatrayavādavu; guṇatrayadinda malatrayaṅgaḷādavu; malatrayaṅgaḷinda lōkaracane heccittu; lōkaracane heccida pāpapuṇyaṅgaḷādavu; pāpapuṇyaṅgaḷinda svarganarakaṅgaḷādavu; svarganarakaṅgaḷinda bhēdavāgi keṭṭa kēḍa nōḍi tanna māyeya seḷedanu. Māyeya seḷeyitu, sarvavu layavāgi nīnobbane uḷide. Uḷide embudu śāstraprasid'dha- samudrada nīru mēghavāgi, mēghada nīru haḷḷakoḷḷavāgi, matte samudradante. Adarante onde sthaladalli nintu nōḍalollade, anēka sthānagaḷannu dharisi hōguvudu ucitavalla, ele jīvave endu bōdhisida sadguru cennabasavaṇṇana pādakke namō namō endu badukidenayyā, ele kapilasid'dhamallikārjunā.