ವಚನ - 1449     
 
ಸರ್ವಂ ಶಿವಮಯಂ ಜಗತ್ ಎಂಬುದ ತಿಳಿಯದೆ ನುಡಿದವರ ನುಡಿಯಂತೆ ನಡೆಯದಿರಾ ಮನವೆ. `ಸರ್ವಂ ಶಿವಮಯಂ ಜಗತ್' ಎಂದು ತಿಳಿದು ತಿಳಿದು ಸುಖಿಯಾಗಾ ಮನವೆ. ಪಿಂಡ ಬ್ರಹ್ಮಾಂಡಕ್ಕೆ `ತಿಲಷೋಡಶಭಾಗೇನ ಭೇದೋ ನಾಸ್ತಿ ವರಾನನೇ' ಎಂಬುದು ಪುಸಿಯಲ್ಲ ನೋಡಾ ಮನವೆ. ಈಶ್ವರನ ಪಂಚಮುಖದಿಂದ ಪಂಚತತ್ತ್ವಗಳುದಯಿಸಿದವು. ಆ ತತ್ತ್ವಂಗಳೊಂದೊಂದು ಕೂಡಿ ತನ್ನ ಚೈತನ್ಯ ಬೆರೆಸಿದಲ್ಲಿ, ಪಿಂಡ ಬ್ರಹ್ಮಾಂಡವೆನಿಸಿತ್ತು ನೋಡಾ ಮನವೆ. ತನ್ನ ತಾನರಿದು ನೋಡಿದಡೆ, `ಸರ್ವಂ ಶಿವಕಪಿಲಸಿದ್ಧಮಲ್ಲಿಕಾರ್ಜುನಮಯಂ ಜಗತ್' ಎಂದರಿದು ಬಂದಿತ್ತು ನೋಡಾ ಮನವೆ.