ವಚನ - 1617     
 
ಅಂಗೈಯೊಳಗಣ ಅಂಗಜಾರಿಗೆ, ಅಂಗಜನ ಸ್ನೇಹಿತರ ಪಾದಾಂಬುವನೆರೆವನ ಅಂಗ ಚಾಂಡಾಲನಂಗ. ಆತನ ಗೃಹ ಶ್ವಪಚನ ಮನೆ, ಆತನ ಸಂಗ ಮದ್ಯಪಾನ ಸಂಗ. ಆತನ ವಾಕ್ಯ ನಿಶಿತಾಸ್ತ್ರ, ಆತನ ಹೊದ್ದರುವೆ ಸತ್ತ ನಾಯ ಕೊಳೆದೊಗಲು. ಆತನ ಗುರು ನರ, ಆತನ ಲಿಂಗ ಶಿಲೆ. ಆತನ ಅಧಿದೈವ ಪಿಶಾಚಿ, ಆತನ ವಿದ್ಯೆ ರಾಕ್ಷಸವಿದ್ಯೆ! ಇದು ತಪ್ಪದು, ಇದು ತಪ್ಪದು! ಇದು ತಪ್ಪೆನ್ನದು! ಇದು ಪುಸಿಯಾದಡೆ, ಮೂಗ ಕೊಯ್ ಬಾರಾ, ಕಪಿಲಸಿದ್ಧಮಲ್ಲಿಕಾರ್ಜುನಾ.