Index   ವಚನ - 202    Search  
 
ಚರಾಚರಾತ್ಮಕ ಪ್ರಪಂಚವೆಲ್ಲ ಶಿವನ ಚಿದ್ಗರ್ಭದಿಂದುಯಿಸಿಪ್ಪವೆಂದು, ಶಿವಾಭಿನ್ನತ್ವದಿಂ ಸಕಲಪ್ರಾಣಿಗಳಲ್ಲಿ ತನ್ನಾತ್ಮಚೇತನವ ತನ್ನಲ್ಲಿ ಸಕಲ ಪ್ರಾಣಿಗಳ ಆತ್ಮ ಚೇತನವ ಕಂಡು, ದಯಾಪರತ್ವವನುಳ್ಳ ಸರ್ವಜ್ಞತಾ ಶಕ್ತಿಯನು ಭಕ್ತಸ್ಥಲಶಲದಲ್ಲಿ ಪಡೆವುದು ನೋಡಾ. ತನಗೆ ಬಂದ ಅಪವಾದ ನಿಂದೆ ಎಡರಾಪತ್ತುಗಳಲ್ಲಿ ಎದೆಗುಂದದೆ ಬಪ್ಪ ಸುಖ ದುಃಖ ಖೇದ ಹರ್ಷಾದಿಗಳು ಶಿವಾಜ್ಞೆಯಹುದೆಂದು ಪರಿಣತನಪ್ಪ ತೃಪ್ತಿಯ ಶಕ್ತಿಯನು ಮಾಹೇಶ್ವರಸ್ಥಲದಲ್ಲಿ ಪಡೆವುದು ನೋಡಾ. ದೇಹಾದಿ ಆದಿ ಪ್ರಪಂಚಕ್ಕೆ ಮೂಲಿಗನಾದ ಅನಾದಿ ಪರಶಿವನ ಪ್ರಸನ್ನತ್ವವನುಂಟುಮಾಡುವ ಅನಾದಿ ಬೋಧ ಶಕ್ತಿಯನು ಪ್ರಸಾದಿಸ್ಥಲದಲ್ಲಿ ಪಡೆವುದು ನೋಡಾ. ಅಂತಪ್ಪ ದೇಹಾದಿ ಪ್ರಪಂಚದ ಚಲನವಲನವು ತನ್ನಾಶ್ರಯದಲ್ಲಿ ನಡೆದು ತಾನು ಆವುದನ್ನೂ ಆಶ್ರಯಿಸದೆ ಸರ್ವಸ್ವತಂತ್ರ ತಾನೆಂಬರಿವನುಂಟುಮಾಡುವ ಸ್ವತಂತ್ರ ಶಕ್ತಿಯನು ಪ್ರಾಣಲಿಂಗಿಸ್ಥಲದಲ್ಲಿ ಪಡೆವುದು ನೋಡಾ. ತನ್ನಾಶ್ರಯವ ಪಡೆದ ದೃಶ್ಯಮಾನ ದೇಹಾದಿ ಜಗವೆಲ್ಲ ಅನಿತ್ಯವೆಂಬ ಆ ದೃಶ್ಯಮಾನದೇಹಾದಿಗಳ ಮೂಲೋತ್ಪತ್ತಿಗಳಿಗೆ ಕಾರಣನಪ್ಪ ಪತಿಪರಶಿವಲಿಂಗವೇ ನಿತ್ಯವೆಂಬರಿವನುಂಟುಮಾಡುವ ಅಲುಪ್ತ ಶಕ್ತಿಯನು ಶರಣಸ್ಥಲದಲ್ಲಿ ಪಡೆವುದು ನೋಡಾ. ಅಂಗಲಿಂಗಗಳ ಸಂಯೋಗವ ತೋರಿ, ಅಖಂಡ ಪರಶಿವಲಿಂಗೈಕ್ಯವನುಂಟುಮಾಡಿ ಕೊಡುವ ಅನಂತ ಶಕ್ತಿಯನು ಐಕ್ಯಸ್ಥಲದಲ್ಲಿ ಪಡೆವುದು ನೋಡಾ. ಇದಕ್ಕೆ ಶಿವರಹಸ್ಯೇ : 'ಯದ್ಭಕ್ತಿಸ್ಥಲಮಿತ್ಯಾಹುಸ್ತತ್ಸರ್ವಜ್ಞತ್ವಮಿತೀರ್ಯತೇ | ಯನ್ಮಾಹೇಶ್ವರಂ ನಾಮ ಸಾ ತೃಪ್ತಿರ್ಮಮ ಶಾಂಕರಿ || ಯತ್ಪ್ರಸಾದಾಭಿದಂ ಸ್ಥಾನಂ ತದ್ಬೋಧೋ ನಿರಂಕುಶಃ | ಯತ್ಪ್ರಾಣಲಿಂಗಕಂ ನಾಮ ತತ್ಸ್ವಾತಂತ್ರೈಮುದಾಹೃತಂ || ಯದಸ್ತಿ ಶರಣಂ ನಾಮ ಹ್ಯಲುಪ್ತಾ ಶಕ್ತಿರುಚ್ಯತೇ | ಯದೈಕ್ಯಸ್ಥಾನಮೂರ್ಧಸ್ಥಾ ಹ್ಯನಂತಾ ಶಕ್ತಿರುಚ್ಯತೇ' || ಎಂದುದಾಗಿ, ಇಂತಪ್ಪ ಷಟ್‍ಸ್ಥಲಗಳಲ್ಲಿ ಷಡ್ವಿಧ ಶಕ್ತಿಗಳ ಸ್ಥಳಕುಳಂಗಳ ತಿಳಿದು, ಷಡ್ವಿಧ ಲಿಂಗಗಳಲ್ಲಿ ಧ್ಯಾನ ಪೂಜಾದಿಗಳಿಂದ ಅಂಗಗೊಂಡು ಭವದ ಬಟ್ಟೆಯ ಮೆಟ್ಟಿ ನಿಂದಲ್ಲದೆ ಷಟ್‍ಸ್ಥಲಬ್ರಹ್ಮಿಗಳಾಗರು. ಇಂತಲ್ಲದೆ ಅಪವಾದ ನಿಂದೆಗಳ ಪರರ ಮೇಲೆ ಕಣ್ಗಾಣದೆ ಹೊರಿಸುತ್ತ ಪರದಾರ ದಾಶಿ ವೇಶಿ ಸೂಳೆಯರ ಕೂಡಿ ಭುಂಜಿಸಿ ತೊಂಬಲತಿಂಬ ಹೇಸಿ ಮೂಳರು ಪೋತರಾಜ, ಜೋಗಿ, ಕ್ಷಪಣರಂತೆ ಜಟಾ, ತುರುಬು, ಬೋಳುಮುಂಡೆಗೊಂಡು ಕೂಳಿಗಾಗಿ ತಿರುಗುವ ಮೂಳ ಚುಕ್ಕೆಯರ ವಿರಕ್ತ ಷಟ್‍ಸ್ಥಲಬ್ರಹ್ಮಿಗಳೆನಬಹುದೇನಯ್ಯ? ಅಂತಪ್ಪ ಅನಾದಿ ಷಟ್‍ಸ್ಥಲಬ್ರಹ್ಮದ ಷಡ್ವಿಧಶಕ್ತಿಯನರಿದು ವಿರಕ್ತ ಜಂಗಮ ಷಟ್‍ಸ್ಥಲ ಬಾಲಬ್ರಹ್ಮಿ ನಿರಾಭಾರಿಯಾದ ಚೆನ್ನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ ಚೆನ್ನಮಲ್ಲಿಕಾರ್ಜುನಾ.