ವಚನ - 1738     
 
ಪರರಾಣಿಯರ ನೋಡುವಲ್ಲಿ, ಅಂಧನಾಗಿಪ್ಪ ನೋಡಾ ಜಂಗಮನು. ಪರಧನವ ಕಂಡಲ್ಲಿ, ಹುಲಿಯ ಕಂಡ ಹುಲ್ಲೆಯಂತೆ ಭೀತಿಬಡುವ ನೋಡಾ ಜಂಗಮನು. ದುರ್ನರರ ಸಂಭಾಷಣೆಯ ಕೇಳುವಲ್ಲಿ ಅತಿಮೂರ್ಖನಾಗಿಪ್ಪ ನೋಡಾ ಜಂಗಮನು. ದುಷ್ಕರ್ಮಪಥದೊಳರಸುವಲ್ಲಿ, ಕಡುಜಡ ಹೆಳವ ನೋಡಾ ಜಂಗಮನು. ಅಕ್ಷಾಂಗ ವಿಷಯಗಳೊಳು, ನಿಷ್ಕರುಣಿಯಾಗಿಪ್ಪ ನೋಡಾ ಜಂಗಮನು. ಶಿವನಿಂದಕರ ಸ್ವರಗೇಳುವಲ್ಲಿ, ಬಧಿರನಾಗಿಪ್ಪ ನೋಡಾ ಜಂಗಮನು. ದುರಾತ್ಮರಿಗೆ ಜ್ಞಾನದ್ರವ್ಯ ಕೊಡುವಲ್ಲಿ, ಲೋಭಿಯಾಗಿಪ್ಪ ನೋಡಾ ಜಂಗಮನು, ಕಪಿಲಸಿದ್ಧಮಲ್ಲಿಕಾರ್ಜುನನು.