ವಚನ - 1758     
 
ಇಂದ್ರ ನೋಡುವಡೆ ಭಗದೇಹಿ; ಚಂದ್ರ ನೋಡುವಡೆ ಗುರುಪತ್ನೀಗಮನಿ; ಉಪೇಂದ್ರ ನೋಡುವಡೆ ಬಾರದ ಭವದಲ್ಲಿ ಬಂದ ಅವತಾರಿ; ಬ್ರಹ್ಮ ನೋಡುವಡೆ ಸ್ವಪುತ್ರೀಪತಿ; ಮುನಿಗಣ ನೋಡುವಡೆ ಕುಲಹೀನರು; ಗಣಪತಿ ನೋಡುವಡೆ ಗಜಾನನ; ವೀರಭದ್ರ ನೋಡುವಡೆ ಮಹತ್ಪ್ರಳಯಾಗ್ನಿ ಸಮಕ್ರೋಧಿ; ಷಣ್ಮುಖ ನೋಡುವಡೆ ತಾರಕಧ್ವಂಸಿ. ಇವರೆಲ್ಲರು ಎಮ್ಮ ಪೂಜೆಗೆ ಬಾರರು. ನೀ ನೋಡುವಡೆ ಸ್ಮಶಾನವಾಸಿ, ರುಂಡಮಾಲಾದ್ಯಲಂಕಾರ; ನಿನ್ನ ವಾಹನ ಚಿದಂಗ ಆದಿವೃಷಭ. ನಿರೂಪಿಸಾ, ಕಪಿಲಸಿದ್ಧಮಲ್ಲಿಕಾರ್ಜುನಾ.