Index   ವಚನ - 72    Search  
 
ಭಕ್ತನೆಂಬ ನಾಮಧಾರಕಂಗೆ ಆವುದು ಪಥವೆಂದರೆ: ಗುರುಭಕ್ತನಾದರೆ ಜಂಗಮವನಾರಾಧಿಸುವುದು, ಗುರುಶಿಷ್ಯರಿಬ್ಬರ ಗುರುತ್ವ ಮಾಡಿದನಾಗಿ, ಆಚಾರಭಕ್ತನಾದರೆ ಜಂಗಮವನಾರಾಧಿಸುವುದು. ಗುರುಶಿಷ್ಯರಿಬ್ಬರ ಸದಾಚಾರದಲ್ಲಿ ನಿಲಿಸಿದನಾಗಿ, ಲಿಂಗಭಕ್ತನಾದರೆ ಜಂಗಮವನಾರಾಧಿಸುವುದು. ಗುರು ತನ್ನ ಲಿಂಗವ ಶಿಷ್ಯಂಗೆ ಕೊಟ್ಟು ವ್ರತಗೇಡಿಯಾಗಿ ಹೋಹಲ್ಲಿ ಆ ಗುರು ಸಹಿತ ಶಿಷ್ಯಂಗೆ ಸ್ವಾಯತವ ಮಾಡಿದನಾಗಿ. ಪ್ರಸಾದಭಕ್ತನಾದರೆ ಜಂಗಮನಾರಾಧಿಸುವುದು, ಗುರುಶಿಷ್ಯ ಸಂಬಂಧದಲ್ಲಿ ಪ್ರಸಾದೋದ್ಭವವ ತೋರಿದನಾಗಿ. ಇಂತು ಆವ ಪ್ರಕಾರದಲ್ಲಿಯೂ ಜಂಗಮವೆ ಅಧಿಕ. ವೆಂಬ ಉತ್ತರಕ್ಕೆ ಆವುದು ಸಾಕ್ಷಿಯೆಂದರೆ, ಶಿವವಾಕ್ಯವು ಪ್ರಮಾಣು: "ಲಿಂಗದ್ವಯಂ ಸಮಾಖ್ಯಾತಂ ಚರಂ ಚಾಚರಮೇವ ಚ| ಅಚರಂ ಮಂತ್ರಸ್ಥಾಪ್ಯಂ ಹಿ ಚರೇ ನಿತ್ಯಂ ಸದಾಶಿವಃ|| ಲಿಂಗಾರ್ಪಿತಂ ನ ಕರ್ತವ್ಯಂ ಕರ್ತವ್ಯಂ ಜಂಗಮಾರ್ಪಿತಂ| ಲಿಂಗಾಚಾರಂ ಸಮಾಖ್ಯಾತಂ ಜಂಗಮಸ್ಯ ವಿಶೇಷತಃ"|| ಇಂತು ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯಂಗೆ ಜಂಗಮಸಹಿತ ಮಾಡುವುದು ಸದಾಚಾರ, ಜಂಗಮ ವಿರಹಿತ ಅನಾಚಾರ. ಇಂತು ಶಿವನಲ್ಲಿ ಏಕಾರ್ಥವಾದ ಕಾರಣ ಜಂಗಮಪ್ರಾಣಿಯಾದ ಜಂಗಮಪ್ರಸಾದಿಯಾದ ಬಸವಣ್ಣ. ಆ ಬಸವಣ್ಣನ ಪ್ರಸಾದದಿಂದ ಬದುಕಿದೆ ಕಾಣಾ ಕೂಡಲಚೆನ್ನಸಂಗಯ್ಯಾ.