Index   ವಚನ - 125    Search  
 
ಶ್ರೀಗುರು ಲಿಂಗ ಜಂಗಮಕ್ಕೆ ಅರ್ಚನೆ ಪೂಜನೆ ದಾಸೋಹವನು ಧರ್ಮವ ಕಾಮಿಸಿ ಮಾಡಿದರೆ ಧರ್ಮವಪ್ಪುದು, ಅರ್ಥವ ಕಾಮಿಸಿ ಮಾಡಿದರೆ ಅರ್ಥವಪ್ಪುದು, ಕಾಮವ ಕಾಮಿಸಿ ಮಾಡಿದರೆ ಕಾಮವಪ್ಪುದು, ಮೋಕ್ಷವ ಕಾಮಿಸಿ ಮಾಡಿದರೆ ಮೋಕ್ಷವಪ್ಪುದು, ಸಾಲೋಕ್ಯವ ಕಾಮಿಸಿ ಮಾಡಿದರೆ ಸಾಲೋಕ್ಯವಪ್ಪುದು, ಸಾಮೀಪ್ಯವ ಕಾಮಿಸಿ ಮಾಡಿದರೆ ಸಾಮೀಪ್ಯವಪ್ಪುದು, ಸಾರೂಪ್ಯವ ಕಾಮಿಸಿ ಮಾಡಿದರೆ ಸಾರೂಪ್ಯವಪ್ಪುದು, ಸಾಯುಜ್ಯವ ಕಾಮಿಸಿ ಮಾಡಿದರೆ ಸಾಯುಜ್ಯವಪ್ಪುದು, ಕಾಮಧೇನುವ ಕಾಮಿಸಿ ಮಾಡಿದರೆ ಕಾಮಧೇನುವಪ್ಪುದು, ಕಲ್ಪತರುವ ಕಾಮಿಸಿ ಮಾಡಿದರೆ ಕಲ್ಪತರುವಪ್ಪುದು, ಚಿಂತಾಮಣಿಯ ಕಾಮಿಸಿ ಮಾಡಿದರೆ ಚಿಂತಾಮಣಿಯಪ್ಪುದು ಪರುಷವ ಕಾಮಿಸಿ ಮಾಡಿದರೆ ಪರುಷವಪ್ಪುದು, ಆವುದನಾವುದ ಕಾಮಿಸಿದರೆ ಕಾಮಿಸಿದ ಫಲ ತಪ್ಪದು. ಇದು ಕಾರಣ ಕಾಮಿಸದ ನಿಷ್ಕಾಮದಾಸೋಹ ಕೂಡಲಚನ್ನಸಂಗಾ ನಿಮ್ಮ ಶರಣಂಗೆ.