Index   ವಚನ - 154    Search  
 
ದ್ವಿಜರು ಪ್ರತಿಸಾಂವತ್ಸರಿಕ ಶ್ರಾದ್ಧವ ಮಾಡುವಲ್ಲಿ, "ವಿಶ್ವೇದೇವಾನುಜ್ಞಯಾ ಪಿತೃಕಾರ್ಯೇ ಪ್ರವರ್ತಯೇತ್" ಎಂಬ ವಚನವಿಡಿದು "ಗಯಾಯಾಂ ಶ್ರೀರುದ್ರಪಾದೇ ದತ್ತಮಸ್ತು" ಎಂದು ಪಿಂಡವನಿಟ್ಟು, "ವಸುರುದ್ರಾರ್ಕರೂಪೇಣ ಮಧ್ಯಪಿಂಡಸ್ತು ಪುತ್ರತಃ| ವೇದೋಕ್ತರುದ್ರನಿರ್ಮಾಲ್ಯಂ ಕಿಂ ಪುನರ್ಬಹುಭಾಷಣೈ"|| ಎಂದು ರುದ್ರಪಿಂಡದಿಂ ಜನಿಸಿ, "ಜನ್ಮನಾ ಜಾಯತೇ ಶೂದ್ರಃ" ಎನಿಸಿಹನೆಂಬ ಶ್ರುತಿಯ ತೊಡೆದು, ಸಾವಿತ್ರಪ್ರದಾನ ಗಾಯತ್ರೀ ಉಪದೇಶವಂ ಮಾಡಿ, "ಮಾನಸ್ತೋಕೇ ತನಯೇ" ಎಂಬ ಮಂತ್ರದಿಂ "ತ್ರಿಯಾಯುಷಂ ಜಮದಗ್ನೇಃ" ಎಂದು ವಿಭೂತಿಯನಿಟ್ಟು, ರುದ್ರಮುಖದಿಂದ ಬ್ರಹ್ಮರಾಗಿ ಶಿವನಿರ್ಮಾಲ್ಯ ಪಾದೋದಕ ಪ್ರಸಾದಮಂ ಧರಿಸಲಾಗದೆಂಬ ಶ್ರುತಿಬಾಹ್ಯ ಶಾಪಹತರನೇನೆಂಬೆನಯ್ಯಾ? ಕೂಡಲಚೆನ್ನಸಂಗಮದೇವಾ.