ಪಿತನಾಚಾರವನುದ್ಧರಿಸುವಾತ ಪುತ್ರನಲ್ಲದೆ
ಗತಿಗೆಡಿಸುವಾತ ಪುತ್ರನಲ್ಲ.
ತಂದೆಯ ಅಂಗದ ಮೇಲಣ ಲಿಂಗವ ಹಿಂಗಿಸಿ
ಆತನ ಭೂತಪ್ರಾಣಿಯ ಮಾಡಿ
ಕಳುಹಿದಾತ ಪುತ್ರನೆ ಅಲ್ಲ,
ಅವ ದುರಾತ್ಮನು.
ತಂದೆಯ ಬರುಕಾಯವ ಮಾಡಿ
ಭಕ್ತನಾದಾತ ಪುತ್ರನೇ? ಅಲ್ಲ,
ಅವ ಜ್ಞಾನಶೂನ್ಯನು.
ಇಲ್ಲಿ "ಭೂನರಕಂ ವ್ರಜೇತ್" ಎಂಬ ಶ್ರುತಿಯ ಕೇಳಿ,
ವಿಸ್ತರಿಸಿ ನೋಡಿ ನೋಡಿ,
ಕುಳ್ಳಿರಿಸಿ, ಅವನ ಭಕ್ತನ ಮಾಡಿದಾತನು
ಪಂಚಮಹಾಪಾತಕಿ.
ಅಲ್ಲಿಗೆ ಹೋದಾತ ಭೂತಪ್ರಾಣಿ,
ಭಕ್ತನಾದಾತ ಪ್ರೇತಲಿಂಗ ಸಂಸ್ಕಾರಿ,
ಭಕ್ತನ ಮಾಡಿದವರಿಗೆ ರೌರವನರಕ,
"ಭೂತಲಿಂಗೇನ ಸಂಸ್ಕಾರೀ ಭೂತಪ್ರಾಣಿಷು ಜಾಯತೇ|
ಪ್ರಭಾತೇ ತನ್ಮುಖಂ ದೃಷ್ಟ್ವಾ ಕೋಟಿಜನ್ಮನಿ ಸೂಕರಃ"|| ಎಂದಾಗಿದೆ
ಇದು ಕಾರಣ
ಕೂಡಲಚೆನ್ನಸಂಗಯ್ಯನಲ್ಲಿ
ತಪ್ಪದು ಅಘೋರನರಕ.