Index   ವಚನ - 301    Search  
 
ಕಾಲಚಕ್ರ ಕರ್ಮಚಕ್ರ ನಾದಚಕ್ರ ಬಿಂದುಚಕ್ರ- ಈ ನಾಲ್ಕು ಚಕ್ರವ ಸಾಧಿಸಿಹೆವೆಂಬ ಹಿರಿಯರೆಲ್ಲ ಕೆಟ್ಟು ಹೋದರು ನೋಡಾ. ಕಾಲಚಕ್ರವು ಘ್ರಾಣದಿಂದ ನಡೆವುದು, ಕರ್ಮಚಕ್ರವು ನಯನದಿಂದ ನಡೆವುದು, ನಾದಚಕ್ರವು ಶ್ರೋತ್ರದಿಂದ ನಡೆವುದು ಬಿಂದುಚಕ್ರವು ಜಿಹ್ವೆಯಿಂದ ನಡೆವುದು. ಕಾಲಚಕ್ರ ಗುರುಕ್ಷೇತ್ರ, ಕರ್ಮಚಕ್ರ ಲಿಂಗಕ್ಷೇತ್ರ, ನಾದಚಕ್ರ ಜಂಗಮಕ್ಷೇತ್ರ, ಬಿಂದುಚಕ್ರ ಪ್ರಸಾದಕ್ಷೇತ್ರ. ಈ ನಾಲ್ಕರ ಮನದ ಕೊನೆಯ ಮೊನೆಯ ಮೇಲೆ ಸಿಂಹಾಸನನಾಗಿಪ್ಪ ನಮ್ಮ ಕೂಡಲಚೆನ್ನಸಂಗಮದೇವ.