ಕಂಗಳಾಶ್ರಯದ ಸೋಂಕಿನ ಸುಖಸಂಬಂಧವನು
ಮಹದಾಶ್ರಯಕ್ಕೆ ತಂದು ಸೂಸಲೀಯದೆ ನಿಮಗರ್ಪಿಸುವೆ.
ನಾಶಿಕಾಶ್ರಯದ ಸೋಂಕಿನ ಸುಖಸಂಬಂಧವನು
ಮಹದಾಶ್ರಯಕ್ಕೆ ತಂದು ಸೂಸಲೀಯದೆ ನಿಮಗರ್ಪಿಸುವೆ.
ಈ ಎರಡುಸ್ಥಾನ ಮೊದಲಾದ ಷಡುಸ್ಥಾನಾಶ್ರಯದ
ಸೋಂಕಿನ ಸುಖಸಂಬಂಧವನು ಮಹಾದಾಶ್ರಯಕ್ಕೆ ತಂದು
ಸೂಸಲೀಯದೆ ಷಡುವಿಧ ಲಿಂಗಂಗಳಿಗರ್ಪಿಸುವೆ.
ಆಪ್ಯಾಯನದಲ್ಲಿ [ಅಂಗವಿಸುವ] ಸಚರಾಚರವ
ಚೈತನ್ಯದ ಮಧ್ಯಕ್ಕೆ ತಂದು ನಾನರ್ಪಿಸುವೆ.
ಇದು ಕಾರಣ, ಕೂಡಲಚೆನ್ನಸಂಗಾ
ಬಸವಣ್ಣನ ಪ್ರಸಾದದಿಂದ ಪ್ರಸಾದಿಯಾದೆನಯ್ಯಾ.