ವಚನ - 188     
 
ಗುದಸ್ಥಾನದಲ್ಲಿ ಆಧಾರಚಕ್ರ, ಪೃಥ್ವಿಯೆಂಬ ಮಹಾಭೂತ, ಚತುಃಕೋಣೆ ಚೌದಳ ಪದ್ಮ, ಅಲ್ಲಿ ಇಹ ಅಕ್ಷರ ನಾಲ್ಕು-ವ, ಶ, ಷ, ಸ, ಅದರ ವರ್ಣ ಸುವರ್ಣ, ಅದಕ್ಕೆ ಅಧಿದೇವತೆ ದಾಕ್ಷಾಯಣಿ. ಲಿಂಗಸ್ಥಾನದಲ್ಲಿ ಸ್ವಾಧಿಷ್ಠಾನಚಕ್ರ, ಅಪ್ಪುವೆಂಬ ಮಹಾಭೂತ, ಧನುರ್ಗತಿ, ಷಡುದಳ ಪದ್ಮ, ಅಲ್ಲಿ ಇಹ ಅಕ್ಷರವಾರು ಬ, ಭ, ಮ, ಯ, ರ,ಲ, ಅದರ ವರ್ಣ ಪಚ್ಚೆಯ ವರ್ಣ, ಅದಕ್ಕೆ ಅಧಿದೇವತೆ ಬಹ್ಮನು. ನಾಭಿಸ್ಥಾನದಲ್ಲಿ ಮಣಿಪೂರಕವೆಂಬಚಕ್ರ, ತೇಜವೆಂಬ ಮಹಾಭೂತ, ತ್ರಿಕೋಣೆ, ದಶದಳ ಪದ್ಮ ಅಲ್ಲಿ ಇಹ ಅಕ್ಷರ ಹತ್ತು ಡ, ಢ, ಣ, ತ, ಥ, ದ, ಧ, ನ, ಪ, ಫ, ಅದರ ವರ್ಣ ಕೃಷ್ಣವರ್ಣ, ಅದಕ್ಕೆ ಅಧಿದೇವತೆ ವಿಷ್ಣು. ಹೃದಯಸ್ಥಾನದಲ್ಲಿ ಅನಾಹತಚಕ್ರ, ವಾಯುವೆಂಬ ಮಹಾಭೂತ, ಷಟ್ಕೋಣೆ, ದ್ವಾದಶಗಳ ಪದ್ಮ ಅಲ್ಲಿ ಇಹ ಅಕ್ಷರ ಹನ್ನೆರಡು- ಕ, ಖ, ಗ, ಘ, ಙ, ಚ, ಛ, ಜ, ಝ, ಞ, ಟ, ಠ, ಅದರ ವರ್ಣ ಕುಂಕುಮವರ್ಣ, ಅದಕ್ಕೆ ಅಧಿದೇವತೆ ಮಹೇಶ್ವರನು. ಕಂಠಸ್ಥಾನದಲ್ಲಿ ವಿಶುದ್ಧಿಚಕ್ರ, ಆಕಾಶವೆಂಬ ಮಹಾಭೂತ, ವರ್ತುಲಾಕಾರ, ಷೋಡಶದಳ ಪದ್ಮ, ಅಲ್ಲಿ ಇಹ ಅಕ್ಷರ ಹದಿನಾರು ಅ, ಆ,ಇ,ಈ,ಉ,ಊ,ಋ,ೠ,ಌ, ಌ ಏ, ಐ, ಓ, ಔ, ಅಂ, ಅಃ, ಅದರ ವರ್ಣ ಶ್ವೇತವರ್ಣ, ಅದಕ್ಕೆ ಅಧಿದೇವತೆ ಸದಾಶಿವನು. ಭ್ರೂಮಧ್ಯಸ್ಥಾನದಲ್ಲಿ ಆಜ್ಞಾಚಕ್ರ, ಮನವೆಂಬ ಮಹಾಭೂತ, ತಮಂಧಾಕಾರ, ದ್ವಿದಳಪದ್ಮ ಅಲ್ಲಿ ಇಹ ಅಕ್ಷರವೆರಡು ಹಂ,ಕ್ಷಂ, ಅದರ ವರ್ಣ ಮಾಣಿಕ್ಯವರ್ಣ, ಅದಕ್ಕೆ ಅಧಿದೇವತೆ ಶ್ರೀಗುರು. ಉನ್ಮನೀಜ್ಯೋತಿ ಬ್ರಹ್ಮರಂಧ್ರದ ಮೇಲೆ. ಸಹಸ್ರದಳ ಪದ್ಮ, ಅಲ್ಲಿ ಅಮೃತವಿಹುದು ಅಲ್ಲಿ `ಓಂ' ಕಾರಸ್ವರೂಪವಾಗಿ ಗುಹೇಶ್ವರಲಿಂಗವು ಸದಾಸನ್ನಿಹಿತನು.