ಉತ್ತರ ದಕ್ಷಿಣ ಪೂರ್ವ ಪಶ್ಚಿಮದ
ಬಂದ ಬಟ್ಟೆಯನಾಲಿಸಿ,
ವಾಯು ಬಂಧನಮಂ ಮಾಡಿ,
ಪಶ್ಚಿಮದ್ವಾರದಲ್ಲಿ ಪ್ರಾಣನಿವಾಸಿಯಾಗಿದ್ದನಾ ಶರಣ.
ಅಧೋನಾಳದಲ್ಲಿ ನಿರುತ, ಮಧ್ಯನಾಳದಲ್ಲಿ ನಿರಾಳ,
ಊರ್ಧ್ವನಾಳದಲ್ಲಿ ಸುರಾಳ.
ವ್ಯೋಮಕುಸುಮದ ಕೊನೆಯ
ಶೈತ್ಯೋದಕವ ಧರಿಸಿದ ಘಟಕ್ಕೆ ಕೇಡಿಲ್ಲಾಗಿ,
ಲಿಂಗಕ್ಕೆ ಪ್ರಾಣಕ್ಕೆ ಒಂದೆಂಬ ಕಾರಣ ಅಚಳವೆನಿಸಿತ್ತು.
ಇದು ಕಾರಣ ಕೂಡಲಚೆನ್ನಸಂಗಮದೇವಾ
ಎನ್ನ ಪ್ರಾಣಕ್ಕೆ ಭವವಿಲ್ಲ, ಬಂಧನವಿಲ್ಲ.