Index   ವಚನ - 542    Search  
 
ಅಂಡಜ ಸ್ವೇದಜ ಉದ್ಭಿಜ ಜರಾಯುಜ ಈ ನಾಲ್ಕು ಯೋನಿಗಳಲ್ಲಿ ಬರುತ್ತಿಹ ಅನಂತಕೋಟಿ ಜೀವ ಸತ್ತ ಪಾಪವು [ವಿಧಿಯ] ತಾಗೂದೆ ಅಯ್ಯಾ? ಕಾರ್ಮೇಘ ಗಗನದಿಂದ ಸುರಿಯಲು ಭೂಮಿ ಜರ್ಜರಿತವಾಗಿ ಹಳ್ಳ ಕೊಳ್ಳ ಕೆರೆ ತುಂಬಿ ದಶದಿಕ್ಕುಗಳೆಲ್ಲ ಭರಿತಂಗಳಾಗಿ ಪುರಂಗಳ ಪೊಗಲು ಅನಂತಕೋಟಿ ಜೀವ ಸತ್ತ ಪಾಪವು ಮೇಘಂಗಳಿಗೆ ತಾಗೂದೆ ಅಯ್ಯಾ? ಕಾನನದಡವಿಯೊಳಗೆ ಒಂದೊಂದು ಕಾಡುಗಿಚ್ಚು ಹುಟ್ಟಿ ಧಿಗಿಲು ಭುಗಿಲೆಂದು ಉರಿ ಸುಳಿಗೊಂಡಟ್ಟಿ ಸುಡುವಲ್ಲಿ ಅನಂತಕೋಟಿ ಜೀವ ಸತ್ತ ಪಾಪವು ಹುತವಹನ ತಾಗೂದೆ ಅಯ್ಯಾ? ದೆಸೆದಿಕ್ಕುಗಳು ಭರಿತವಾಗಿ ಪವನನಲ್ಲಿಯೆ ಬಲಿದು ಬ್ರಹ್ಮಾಂಡವ ಮುಟ್ಟಿ ಮಲೆತು ಬೀಸುವಲ್ಲಿ ಅನಂತಕೋಟಿ ಜೀವಗಳು ಸತ್ತ ಪಾಪವು ಪವನನ ತಾಗೂದೆ ಅಯ್ಯಾ? ಧರೆಹತ್ತಿ ಉರಿದು ಬ್ರಹ್ಮಾಂಡವ ತಾಗಲು ಕೆಂಡದ ಮಳೆ ಸುರಿಯಲು ಸುರರ ಅಸುರರ ಎಲ್ಲಾ ಭುಗಿಲು ಭುಗಿಲುಯೆಂದು ಉರಿಯೆಯ್ದೆ ತಾಗಲ್ಕೆ ವಿಶೇಷ ಪಾಪವು ಗಗನವ ತಾಗೂದೆ ಅಯ್ಯಾ? ಪೃಥ್ವಿ ಅಪ್ಪು, ತೇಜ, ವಾಯು, ಆಕಾಶ, ಸೂರ್ಯ, ಚಂದ್ರ ಆತ್ಮ ಈ ಅಷ್ಟತನುಮೂರ್ತಿಗಳು ನಷ್ಟವಾದ ಪಾಪ ಸದಾಶಿವನ ತಾಗೂದೆ ಅಯ್ಯಾ? ಉತ್ಪತ್ತಿ, ಸ್ಥಿತಿ, ಲಯ ಕಾಲಕಲ್ಪಿತನಲ್ಲ ಪ್ರಳಯರಹಿತ ಕೂಡಲಚೆನ್ನಸಂಗಾ ನಿಮ್ಮ ಶರಣ.