Index   ವಚನ - 742    Search  
 
ಭಕ್ತನಾದರೆ ತನುಮನಧನದಾಸೆ ಅಳಿದುಳಿದಿರಬೇಕು. ಮಾಹೇಶ್ವರನಾದರೆ ಪರಧನ ಪರಸತಿಯಾಸೆಯಳಿದು ಉಳಿದಿರಬೇಕು. ಪ್ರಸಾದಿಯಾದಡೆ ಪ್ರಸಾದ ಅವಗ್ರಾಹಿಯಾಗಿ, ಪ್ರಸಾದದ ಘಟವಳಿಯದೆ ಉಳಿದಿರಬೇಕು. ಪ್ರಾಣಲಿಂಗಿಯಾದರೆ ಸುಖ-ದುಃಖವ ಮರೆದು ಪ್ರಾಣಲಿಂಗದಲ್ಲಿ ಪರಿಣಾಮಿಯಾಗಿರಬೇಕು. ಶರಣನಾದರೆ ಸತಿಯರ ಸಂಗವ ತೊರೆದು ತಾನು ಲಿಂಗಕ್ಕೆ ಸತಿಯಾಗಿರಬೇಕು- ಲಿಂಗೈಕ್ಯನಾದರೆ ಲಿಂಗದಲ್ಲಿ ಬೆರಸಿ ಬೇರಿಲ್ಲದಿರಬೇಕು, ಕೂಡಲಚೆನ್ನಸಂಗಯ್ಯಾ.