ಶಿಷ್ಯನ ಪೂರ್ವಶ್ರಯವ ಕಳೆದು
ಭಕ್ತನ ಮಾಡಿದ ಬಳಿಕ,
ವಾಯುಪ್ರಾಣಿಯ ಕಳೆದು
ಲಿಂಗಪ್ರಾಣಿಯ ಮಾಡಿದ ಬಳಿಕ,
ಚಂಪಭೂತಕಾಯವ ಕಳೆದು
ಪ್ರಸಾದಕಾಯವ ಮಾಡಿದ ಬಳಿಕ,
ಅಲ್ಲಿ ಕುಲಸೂತಕ, ಛಲಸೂತಕ,
ತನುಸೂತಕ, ಮನಸೂತಕ,
ನೆನಹುಸೂತಕ, ಭಾವಸೂತಕವುಳ್ಳನಕ್ಕ
ಲಿಂಗವಂತರೆಂತೆಂಬೆ?
ಕುಲಸೂತಕವುಳ್ಳನ್ನಕ್ಕ ಭಕ್ತನಲ್ಲ,
ಛಲಸೂತಕವುಳ್ಳನ್ನಕ್ಕ ಪ್ರಾಣಲಿಂಗಿಯಲ್ಲ,
ತನುಸೂತಕವುಳ್ಳನ್ನಕ್ಕ ಪ್ರಸಾದಿಯಲ್ಲ,
ಮನಸೂತಕವುಳ್ಳನ್ನಕ್ಕ ಪ್ರಾಣಲಿಂಗಿಯಲ್ಲ,
ನೆನಹುಸೂತಕವುಳ್ಳನ್ನಕ್ಕ ಶರಣನಲ್ಲ,
ಭಾವಸೂತಕವುಳ್ಳನ್ನಕ್ಕ ಲಿಂಗೈಕ್ಯನಲ್ಲ
ಇಂತೀ ಷಡುಸೂತಕವಳಿದುಳಿದ
ಕೂಡಲ ಚೆನ್ನಸಂಗಾ ನಿಮ್ಮ ಶರಣ.