Index   ವಚನ - 829    Search  
 
ಹನ್ನೆರಡು ಗಾವುದ ವಿಸ್ತೀರ್ಣದ ಮಹಾಪಟ್ಟಣಕ್ಕೆ ಕಲ್ಯಾಣವೆಂಬ ಪ್ರಣತೆ, ಮಹತ್ತೆಂಬ ಎಣ್ಣೆ, ಬಸವನೆಂಬ ಸ್ವಯಂಜ್ಯೋತಿ. ಅಲ್ಲಿ ಕಾಳಯ್ಯ ಚವುಡಯ್ಯ ಕೋಲ ಸಾತಯ್ಯ, ಮುಖವಾಡದ ಕೇಶಿರಾಜ ಖಂಡನೆಯ ಬೊಮ್ಮಣ್ಣ, ಮಿಂಡ ಮಲ್ಲಿನಾಥ ಹಡಪದ ಅಪ್ಪಣ್ಣ ಮಡಿವಾಳ ಮಾಚಯ್ಯ, ಅವ್ವೆ ನಾಗವ್ವೆ ಸಹಿತ ಇವರೆಲ್ಲರೂ ಸಂಗನಬಸವಣ್ಣನ ಬಯಲ ಕೂಡಿದರು. ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಇವರ ಪ್ರಸಾದದ ಬಯಲೆನಗಾಯಿತ್ತು.