Index   ವಚನ - 884    Search  
 
ಅಂಗದ ಲಿಂಗವ ಲಿಂಗವೆಂದು ಪೂಜಿಸುವೆನೆ? ಅದು ಅಂಗಲಿಂಗವಲ್ಲ. ಅದೇನು ಕಾರಣ? ಅದು ಅಂಗದ ಮೇಲರತು ಮುಂದೆ ಜಂಗಮವೆಂದು ತೋರಿತ್ತಾಗಿ. ಜಂಗಮವ ಲಿಂಗವೆಂದು ಅರ್ಚಿಸಿ ಪೂಜಿಸಿಕೊಂಡಿಹೆನೆ? ಆ ಜಂಗಮ ಲಿಂಗವಲ್ಲ. ಅದೇನು ಕಾರಣ? ಮುಂದೆ ಪ್ರಸಾದಲಿಂಗವೆಂದು ತೋರಿತ್ತಾಗಿ. ಆ ಪ್ರಸಾದಲಿಂಗವ ಲಿಂಗವೆಂದು ಅರ್ಚಿಸಿ ಪೂಜಿಸಿಕೊಂಡಿಹೆನೆ? ಅದು ಪ್ರಸಾದಲಿಂಗವಲ್ಲ, ಅದೇನು ಕಾರಣ? ಮುಂದೆ ಮಹಾಪ್ರಸಾದವ ತೋರಿತ್ತಾಗಿ. ಆ ಮಹಾಪ್ರಸಾದವೆ ನೀವಾಗಿ ಸುಖಿಯಾದೆ ಕೂಡಲಚೆನ್ನಸಂಗಮದೇವಾ.